ಚಿತ್ರದುರ್ಗ: ಕಳೆದ ಕೆಲವು ತಿಂಗಳಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಯಾಕಂದ್ರೆ ನಿರೀಕ್ಷೆಯಂತೆ ಅಡಿಕೆ ಧಾರಣೆ50 ಸಾವಿರಕ್ಕೆ ಏರಿಕೆಯಾಗಿತ್ತು. ಆದರೆ ಈಗ ಮಳೆಗಾಲ ಶುರುವಾಗಿರುವ ಹೊತ್ತಲ್ಲೇ ಇದ್ದಕ್ಕಿದ್ದ ಹಾಗೇ ಅಡಿಕೆ ಧಾರಣೆಯಲ್ಲಿ ಬೆಲೆ ಕುಸಿತವಾಗಿದೆ. ಇದು ರೈತರ ಬೇಸರಕ್ಕೆ, ನೋವಿಗೆ ಕಾರಣವಾಗಿದೆ.
ವಿವಿಧ ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ಹತ್ತು ಸಾವಿರ ಕುಸಿತ ಕಂಡಿದೆ. ಹೊಳಲ್ಕೆರೆಯಲ್ಲಿ ಕ್ವಿಂಟಾಲ್ ರಾಶಿ ಅಡಿಕೆ ಧಾರಣೆ ಕನಿಷ್ಠ ₹50,519 ಇದ್ದರೆ ಗರಿಷ್ಠ 52,819 ರೂಪಾಯಿ ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 47,512 ರೂಪಾಯಿ ಇದ್ದರೆ ಗರಿಷ್ಠ 53,700 ರೂಪಾಯಿ ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 28,989 ರೂಪಾಯಿ ಇದ್ದರೆ ಗರುಷ್ಠ 52,219 ರೂಪಾಯಿಗೆ ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ 30,008-53,009 ರೂಪಾಯಿ ದರಕ್ಕೆ ಮಾರಾಟವಾಗಿದೆ. ಸರಕು ಅಡಿಕೆ ಧಾರಣೆ ಕನಿಷ್ಠ 54,069 ಇದ್ದರೆ ಗರಿಷ್ಠ 79,896 ಆಗಿತ್ತು.
ಶಿವಮೊಗ್ಗ, ಚಿತ್ರದುರ್ಗ ಭಾಗದಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಬೆಲೆಯಲ್ಲಿ ದಿಢೀರನೇ ಕುಸಿತ ಕಂಡಿರುವುದು ರೈತರಿಗೆ ಬೇಸರ ತರಿಸಿದೆ. ಮುಂಗಾರು ಮಳೆ ಈಗ ಶುರುವಾಗಿದೆ. ಆದರೆ ಬರಗಾಲದ ಸಮಯದಲ್ಲಿ ಅಡಿಕೆ ಮರಗಳನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೋ ಹೀಗೋ ನೀರು ಬಿಟ್ಟು ಕಾಪಾಡಿಕೊಂಡಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಮಾರುಕಟ್ಟೆಯಲ್ಲೂ ಅಡಿಕೆ ಬೆಲೆ 50 ಸಾವಿರಕ್ಕೂ ಹೆಚ್ಚು ತಲುಪಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೇ ಹತ್ತು ಸಾವಿರದ ತನಕ ಕುಸಿದಿರುವುದು ರೈತರಿಗೆ ಆಘಾತ ಉಂಟಾಗಿದೆ.