Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ನೀರು, ನಮ್ಮ ಹಕ್ಕು ಆಶಯದಡಿ ಮೂರು ರಾಜ್ಯಗಳ ರೈತರ ರಕ್ಷಣೆಗೆ ಐತಿಹಾಸಿಕ ತೀರ್ಮಾನ : ಸಿಎಂ ಡಿ.ಕೆ.ಶಿವಕುಮಾರ್

---Advertisement---

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ 33 ಸ್ಪಿಲ್ವೇ ಗೇಟ್ ಗಳನ್ನು ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದೊಂದಿಗೆ ಯಶಸ್ವಿಯಾಗಿ ಲೋಕಾರ್ಪಣೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಪಾಲ್ಗೊಂಡು ಈ ಮಹತ್ವದ ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಲವಾರು ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಶಾರದಾ ದೇವಿ, ಹುಲಿಗೆಮ್ಮ, ಹುಚ್ಚರಾಯಸ್ವಾಮಿ, ಅಜ್ಜಯ್ಯ, ಹಂಪಿ ವಿರೂಪಾಕ್ಷ ಹಾಗೂ ರಾಘವೇಂದ್ರ ಸ್ವಾಮಿಯ ಕೃಪೆಯಿಂದಾಗಿ ಈ ಐತಿಹಾಸಿಕ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು. ಸರಕಾರವು 33 ಗೇಟ್ಗಳನ್ನು ಬದಲಾಯಿಸುವ ದೃಢ ತೀರ್ಮಾನ ಕೈಗೊಳ್ಳುವ ಮೂಲಕ ಭಗವಂತ ಮೂರು ರಾಜ್ಯಗಳ ರೈತರನ್ನು ರಕ್ಷಿಸುವ ಜವಾಬ್ದಾರಿಯನ್ನು ನಮಗೆ ನೀಡಿದ್ದಾನೆ. ತಾನು ಮುಖ್ಯಮಂತ್ರಿಯಾಗಿದ್ದರೂ ಜನರ ಸೇವಕ ಹಾಗೂ ಬಂಧು ಎಂಬ ಜವಾಬ್ದಾರಿಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಅವರು ನುಡಿದರು.

ಇದೇ ಸಂದರ್ಭದಲ್ಲಿ ಅಣೆಕಟ್ಟಿನ 33 ಟಿಎಂಸಿ ನೀರನ್ನು ಉಳಿಸುವ ಬಗ್ಗೆ ರೈತ ಮುಖಂಡರು ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಿಎಂ ತಿಳಿಸಿದರು. ನವಲಿ ಸಮನಾಂತರ ಜಲಾಶಯ ನಿರ್ಮಾಣ ಹಾಗೂ ಹೂಳೆತ್ತುವ ವಿಚಾರ ಸೇರಿದಂತೆ ರೈತ ಕುಟುಂಬಗಳನ್ನು ಕಾಪಾಡುವ ನಿಟ್ಟಿನಲ್ಲಿ ಮೂವರು ಮುಖ್ಯಮಂತ್ರಿಗಳು ಮತ್ತು ಕೇಂದ್ರ ಜಲಶಕ್ತಿ ಸಚಿವರು ಸುದೀರ್ಘ ಚರ್ಚೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಸಚಿವರೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಇಂದು ನಡೆದ ಒಂದು ಗಂಟೆಯ ಸುದೀರ್ಘ ಚರ್ಚೆಯು ದೇಶದ ನೀರಾವರಿ ವಲಯ ಹಾಗೂ ಒಕ್ಕೂಟ ವ್ಯವಸ್ಥೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಆಶಯದೊಂದಿಗೆ ಮೂರು ರಾಜ್ಯಗಳ ರೈತರ ಹಿತರಕ್ಷಣೆಗಾಗಿ ಈ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ತಾನು ಮುಖ್ಯಮಂತ್ರಿಯಾದ ಬಳಿಕ ಭಾಗವಹಿಸುತ್ತಿರುವ ಎರಡನೇ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ ಎಂದು ನೆನಪಿಸಿಕೊಂಡ ಸಿಎಂ, ರೈತನಿಗೆ ಸಂಬಳ, ಬಡ್ತಿ, ಪಿಂಚಣಿ, ರಜೆ ಅಥವಾ ನಿವೃತ್ತಿ ಯಾವುದೂ ಇರುವುದಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ದೇಶಕ್ಕೆ ಅನ್ನ ನೀಡುವ ರೈತನ ಬದುಕನ್ನು ಹಸನುಗೊಳಿಸುವುದು ಮತ್ತು ಈ ಭಾಗದ ಭತ್ತದ ಕಣಜವನ್ನು ರಕ್ಷಿಸುವುದು ನಮ್ಮ ಸರಕಾರದ ದೃಢ ಸಂಕಲ್ಪವಾಗಿದೆ ಎಂದು ಜನತೆಗೆ ಭರವಸೆ ನೀಡಿದರು.

Join WhatsApp

Join Now

Join Telegram

Join Now