ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06 : ಜಿಲ್ಲೆಯ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೇವಲ ಒಂದೇ ದಿನದಲ್ಲಿ ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಿರಿಯೂರು ತಾಲ್ಲೂಕಿನ ಹುಲುಗಲಕುಂಟೆ ಗ್ರಾಮದ ನಿವಾಸಿಗಳಾದ ಸುನೀಲ್ ಆರ್ (33 ವರ್ಷ) ಹಾಗೂ ಸುನೀಲ್ ಎನ್ (30 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.
ದಿನಾಂಕ 04-08-2026 ರಂದು ಮಧ್ಯಾಹ್ನ 12:10 ಗಂಟೆಯ ಸಮಯದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಪರಮೇನಹಳ್ಳಿ ಗೇಟ್‌ನ ಬಳಿ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, KA 16 AB 6756 ನೇ ಮಹಿಂದ್ರಾ ಜೀತೂ (ಟೆಂಪೋ) ಮತ್ತು AP 21 TE 2223 ನೇ ಲಾರಿಯನ್ನು ತಡೆದಿದ್ದರು. ಜೀಪ್‌ನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಹೆದರಿಸಿ ಅವರಿಂದ 7,000/- ರೂಪಾಯಿಗಳನ್ನು ಹಾಗೂ ಲಾರಿ ಚಾಲಕನಿಗೆ ಕೈ-ಕಾಲುಗಳಿಂದ ಹಲ್ಲೆ ಮಾಡಿ ಹೆದರಿಸಿ ಅವನಿಂದ 3,000/- ರೂಪಾಯಿಗಳನ್ನು, ಹೀಗೆ ಒಟ್ಟು 10,000/- ರೂಪಾಯಿಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಜಿಲ್ಲಾ ನಿಸ್ತಂತು ಘಟಕಕ್ಕೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಎಲ್ಲಾ ಠಾಣೆಗಳಿಗೆ, ಚೆಕ್ ಪೋಸ್ಟ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಆರೋಪಿಗಳ ಚಹರೆಗಳನ್ನು ನೀಡಿ ಪತ್ತೆ ಹಚ್ಚುವಂತೆ ಸೂಚಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದ ರಾಜಣ್ಣ.ವಿ ಅವರ ಮಗ ಕಾರ್ತಿಕ್.ಎಂ.ಆರ್ (19 ವರ್ಷ) ನೀಡಿದ ದೂರಿನ ಮೇರೆಗೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ನಂ. 297/2026, ಕಲಂ: 309(6) ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೊಹಮ್ಮದ್ ಸಿರಾಜ್ (ಪ್ರಭಾರೆ) ರವರ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್‌ಗೌಡ್, ಸಿಹೆಚ್‌ಸಿ 1286 ಸಿದ್ದಪ್ಪ ಮತ್ತು ಸಿಪಿಸಿ 2566 ಜಾಫರ್ ಸಾಧಿಕ್ ರವರನ್ನೊಳಗೊಂಡ ಕ್ರೈಂ ತಂಡವನ್ನು ರಚಿಸಿ, ಘಟನೆಯಾಧರಿತ ಮಾಹಿತಿಯನ್ನು ಸಂಗ್ರಹಿಸಲಾಯಿತು.

ದಿನಾಂಕ 05-08-2026 ರಂದು ಬೆಳಿಗ್ಗೆ 07:00 ಗಂಟೆಗೆ ಹುಲುಗುಲಕುಂಟೆ ಗ್ರಾಮದ ಬಸ್ ನಿಲ್ದಾಣದ ಬಳಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸುನೀಲ್ ಆರ್ ಹಾಗೂ ಸುನೀಲ್ ಎನ್ ರವರನ್ನು, ಕೃತ್ಯಕ್ಕೆ ಬಳಸಿದ್ದ KA 16 AB 6756 (ಚಾಸಿಸ್ ಸಂಖ್ಯೆ: MD2A11CY9LCK62072, ಇಂಜಿನ್ ಸಂಖ್ಯೆ: DHYCLK74618) ವಾಹನದೊಂದಿಗೆ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಬೆಳಿಗ್ಗೆ 09:30 ಕ್ಕೆ ದಸ್ತಗಿರಿ ಕ್ರಮ ಜರುಗಿಸಲಾಯಿತು. ಆರೋಪಿಗಳು ದೂರುದಾರರಿಂದ ಸುಲಿಗೆ ಮಾಡಿಕೊಂಡಿದ್ದ 4,200/- ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ಹಿರಿಯೂರು ಸಿಜೆ (ಹಿರಿಯ) ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಘನ ನ್ಯಾಯಾಲಯವು ಆರೋಪಿಗಳಿಗೆ ದಿನಾಂಕ 05-08-2026 ರಿಂದ ದಿನಾಂಕ 17-08-2026 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಪ್ರಕರಣ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರು, ಪಿಎಸ್‌ಐ ಹಾಗೂ ಕ್ರೈಂ ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್ ರವರು ಪ್ರಶಂಸಿದ್ದಾರೆ.











