Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು | ಮೇಟಿಕುರ್ಕಿ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ : ವಿಪುಲ ಉದ್ಯೋಗಾವಕಾಶ

---Advertisement---

ಚಿತ್ರದುರ್ಗ. ಜ.21: ಹಿರಿಯೂರು ತಾಲ್ಲೂಕು ಮೇಟಿಕುರ್ಕಿ ಗ್ರಾಮದ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದೆ. ಇದರಿಂದ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಲಿದ್ದು, ದುಡಿಯುವ ಕೈಗಳಿಗೆ ಕೆಲಸ ಸಿಗುವುದು ಗ್ಯಾರಂಟಿಯಾಗುತ್ತದೆ. ಜಿಲ್ಲೆಯ ವಿದ್ಯಾವಂತ ಯುವಕರಿಗೆ ವಿಪುಲ ಉದ್ಯೋಗಾವಕಾಶಗಳು ಲಭಿಸುತ್ತವೆ. ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಹಾದಿಯಲ್ಲಿ ಮುಂದುವರೆಯಲಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆಶಯ ವ್ಯಕ್ತಪಡಿಸಿದರು.

ಭಾನುವಾರ 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಪಕ್ಕದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದಾವಣಗೆರೆ-ತುಮಕೂರು ನಡುವಿನ ನೇರ ರೈಲು ಮಾರ್ಗದ ನಿರ್ಮಾಣಕ್ಕೆ 1000 ಎಕರೆಗೂ ಹೆಚ್ಚು ಜಮೀನನ್ನು ಸ್ವಾಧೀನಪಡಿಸಿಕೊಂಡು, ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ರೈಲ್ವೆ ಅಭಿವೃದ್ಧಿ ಕಾಮಗಾರಿ ಚಾಲನೆಯಲ್ಲಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನ ಮಟ್ಟವನ್ನು ಸುಧಾರಿಸಿವೆ. ಬಡವರು ಸಮಾನತೆಯಿಂದ ತಲೆ ಎತ್ತಿ ಬದುಕುವ ಅವಕಾಶವನ್ನು ಕಲ್ಪಿಸಿವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಅರ್ಹ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಮತ್ತು ರೂ.170/- ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ರೂ.20.96 ಕೋಟಿ ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯ 3,95,471 ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು
ರೂ.2000/-ವರ್ಗಾವಣೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರತಿದಿನ ಸರಾಸರಿ 65 ಸಾವಿರ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದಕ್ಕಾಗಿ ನಿಗಮಕ್ಕೆ ರೂ.138 ಕೋಟಿ ಪಾವತಿಸಲಾಗಿರುತ್ತದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಪದವೀಧರರು ಮತ್ತು ಡಿಪ್ಲೊಮೊ ಪಾಸಾದವರಿಗೆ ఒట్టు ರೂ.7.86 ಕೋಟಿ ಸಂದಾಯ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 3,78,084 ಫಲಾನುಭವಿಗಳು ನೊಂದಣಿಯಾಗಿದ್ದು ರೂ.234 ಕೋಟಿ ಸರ್ಕಾರದಿಂದ ಭರಿಸಲಾಗಿರುತ್ತದೆ. ಹೊಸದುರ್ಗ ತಾಲ್ಲೂಕಿನಲ್ಲಿ ವಾಣಿ ವಿಲಾಸಸಾಗರ ಜಲಾಶಯದಿಂದ ಮುಳುಗಡೆಯಾಗುವ ಜಮೀನು ಪ್ರದೇಶಗಳನ್ನು ತಡೆಯುವ ಸಲುವಾಗಿ ರೂ.124 ಕೋಟಿಗಳ ಅನುದಾನ, ಜಲಾಶಯದ ಕಾಲುವೆಗಳ ಆಧುನೀಕರಣಕ್ಕಾಗಿ ರೂ.1274 ಕೋಟಿಗಳ ವೆಚ್ಚದಲ್ಲಿ ಯೋಜನೆಯನ್ನು ಸಹ ಸಿದ್ದಪಡಿಸಲಾಗುತ್ತದೆ ಎಂದು
ಸಚಿವ ಡಿ.ಸುಧಾಕರ್ ಹೇಳಿದರು‌.

 

ಗ್ರಾಮೀಣ ಭಾಗದ ಜನರ ಕುಡಿಯುವ ನೀರಿಗಾಗಿ ಮನೆ ಮನೆಗೆ ನೀರಿನ ಸಂಪರ್ಕ ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ವಿವಿಧ ಹಂತಗಳಲ್ಲಿ ಸುಮಾರು 392.79 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಚಾಲನೆಯಲ್ಲಿರುತ್ತವೆ.1947ರಲ್ಲಿ ಸ್ವಾತಂತ್ರ್ಯ ದೊರಕಿತು ಆದರೆ ದೇಶವನ್ನು ಮುನ್ನೆಡೆಸುವ ನೀತಿ ನಿಯಮಗಳನ್ನು ಸಮಾನ ಹಕ್ಕುಗಳನ್ನು ಪ್ರತಿಪಾದಿಸುವ ಸಂವಿಧಾನವೊಂದು ಬೇಕಿತ್ತು. ಅದಕ್ಕಾಗಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರವರು ಡಾ.ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ 7 ಜನ ಸದಸ್ಯರ ಸಮಿತಿಯನ್ನು ನೇಮಕ ಮಾಡಿತು. ಅದರಲ್ಲಿ ನಮ್ಮ ಜಿಲ್ಲೆಯ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪನವರು ಇದ್ದರೆಂಬುದು ಹೆಮ್ಮೆಯ ವಿಷಯ. ಸಂವಿದಾನ ರಾಷ್ಟ್ರ ಮುನ್ನಡೆಸುವ ಕಾನೂನು ದೀವಿಗೆ ಅಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ಸಂಕಥನವೂ ಆಗಿದೆ. ವ್ಯಕ್ತಿಯೊಬ್ಬ ತನ್ನ ಅನನ್ಯತೆಯನ್ನು ಉಳಿಸಿಕೊಂಡು ಎಲ್ಲರೊಳಗೊಂದಾಗಿ ಬದುಕುವ ಅಪೂರ್ವ ಅವಕಾಶವಾಗಿದೆ. ಸಮಾಜದ ತಳವರ್ಗದ ಮನುಷ್ಯನಿಗೂ ಧ್ವನಿಯಾಗಿ ಸಮತೆ, ಮಮತೆ, ಮಾನವೀಯತೆ ಭ್ರಾತೃತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡಿರುವ ಇದು ಭಾರತೀಯರ ಪಾಲಿಗೆ ಒಂದು ಕಾವ್ಯವೂ, ಧರ್ಮವೂ, ಜೀವನ ವಿಧಾನವೂ, ಕರ್ತವ್ಯ ಪಥವೂ ಆಗಿ ವರ್ಗಾತೀತ, ಜಾತ್ಯತೀತ, ಧರ್ಮಾತೀತವಾಗಿ ಎಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಕರ್ತವ್ಯಗಳನ್ನು ಬೋಧಿಸುತ್ತದೆ ಎಂದು
ಸಚಿವ ಡಿ.ಸುಧಾಕರ್ ತಿಳಿಸಿದರು.

ಸಾಧಕರಿಗೆ ಸನ್ಮಾನ:

ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಚಳ್ಳಕೆರೆ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಿ.ನಾಗರಾಜ್, ಹಿರಿಯೂರು ಪೊಲೀಸ್ ಠಾಣೆ ಪಿ.ಎಸ್.ಐ. ಸಿದ್ಧಲಿಂಗೇಶ್ವರ .ಬಿ.ವೈ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮುದ್ದುರಾಜ್.ವೈ, ನಾಯಕನಹಟ್ಟಿ ಪೊಲೀಸ್ ನಿರೀಕ್ಷಕ ಶಿವಕುಮಾರ್.ಕೆ, ಹೊಳಲ್ಕೆರೆ ಕರಗುಂಟೆ ಗ್ರಾಮ ಆಡಳಿತಾಧಿಕಾರಿ ತಿಪ್ಪೇಸ್ವಾಮಿ.ಎಂ, ಮೊಳಕಾಲ್ಮೂರು ಮುರಡಿ ಗ್ರಾಮ ಆಡಳಿತಾಧಿಕಾರಿ ರತ್ನಮ್ಮ, ವಿಕಲಚೇತನರ ಅಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಣ ಇಲಾಖೆಯ ಬಿ.ಐ.ಇ.ಅರ್.ಟಿ ರಾಜೀವ್.ಟಿ, ಎ.ಪಿ.ಡಿ ಸರ್ಕಾರೇತರ ಸಂಸ್ಥೆಯ ನಂದಿನಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶ್ವ ಮಾನವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಸುಧಾ.ಹೆಚ್.ಆರ್, ಕ್ರೀಡೆಯಲ್ಲಿ ಸಾಧನೆ ಮಾಡಿದ ಅಥ್ಲಿಟ್ ನೌಮನ್ ಅಹಮ್ಮದ್ ಷರೀಫ್, ಪ್ಯಾರ ಅಥ್ಲಿಟ್ ಶ್ರೀಹರಿ, ಮೊಳಕಾಲ್ಮೂರು ಆಸ್ಪತ್ರೆ ಪ್ರಸೂತಿ ತಜ್ಞ ಡಾ.ಮಂಜುನಾಥ್ ಅವರಿಗೆ ಗಣರಾಜೋತ್ಸವ ಶುಭ ಸಂದರ್ಭದಲ್ಲಿ ಸನ್ಮಾನಿಸಿ‌ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್, ಅರಣ್ಯ, ಗೃಹ ರಕ್ಷಕ, ಸೇರಿದಂತೆ ವಿವಿಧ ಶಾಲಾ ಕಾಲೇಜಿನ ಎಸ್.ಸಿ.ಸಿ, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಆಕರ್ಷಕ ಪಂಥಸಚಲ ನಡೆಸಿಕೊಟ್ಟರು. ಇದೇ ವೇಳೆ ದೇಶಭಕ್ತಿ ಬಿಂಬಿಸುವ ನೃತ್ಯ ರೂಪಕಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಸಂಸದ ಗೋವಿಂದ .ಎಂ. ಕಾರಜೋಳ, ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರ ಸಭೆ ಅಧ್ಯಕ್ಷೆ ಸುಮಿತಾ.ಬಿ.ಎನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತ ಅಧ್ಯಕ್ಷ ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ರಂಜೀತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಧಿಕಾರಿ ವೆಂಕಟೇಶ್, ನಗರ ಸಭೆ ಪೌರಾಯುಕ್ತೆ ಎಂ.ರೇಣುಕಾ, ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ಇತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...