ಚಿತ್ರದುರ್ಗ, ಅಕ್ಟೋಬರ್. 01 : ನಗರದಲ್ಲಿ ಅಕ್ಟೋಬರ್ 03 ರಂದು ಜರುಗಲಿರುವ ಐತಿಹಾಸಿಕ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದೆ. ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕೋಟೆ ನಿರ್ಮಿಸಲಾಗಿದೆ.
ಬೆಂಗಳೂರು ಸೇರಿದಂತೆ ಹೊರಜಿಲ್ಲೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡಂತೆ 6 ಎಸ್ಪಿಗಳು, 4 ಹೆಚ್ಚುವರಿ ಎಸ್ಪಿಗಳು, 21 ಡಿವೈಎಸ್ಪಿಗಳು, 50 ಸಿಪಿಐಗಳು, 68 ಪಿಎಸ್ಐಗಳು, 218 ಪ್ರೊಬೇಷನರಿ ಪಿಎಸ್ಐಗಳು, 155 ಎಎಸ್ಐಗಳು, 1994 ಹೆಡ್ ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ಗಳು, 750 ಗೃಹರಕ್ಷಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಕೆಎಸ್ಆರ್ಪಿ 16, ಡಿಎಆರ್ 14 ಹಾಗೂ ಕ್ಯೂಆರ್ಟಿ 3 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್ 3 ರ ಬೆಳಿಗ್ಗೆ 6.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆಯವರೆಗೆ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಮತ್ತು ಚಳ್ಳಕೆರೆ ತಾಲೂಕುಗಳಲ್ಲಿ ಸಂಪೂರ್ಣ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
ನಗರದ 159 ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, 26 ಕಣ್ಣಾವಲು ಗೋಪುರಗಳು, 49 ಸ್ಕೈ ಸೆಂಟ್ರಿಗಳು ಮತ್ತು 5 ಡ್ರೋನ್ ಕ್ಯಾಮೆರಾಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದೆ. ಈ ಎಲ್ಲಾ ದೃಶ್ಯಗಳನ್ನು 24 ಗಂಟೆಗಳ ಕಾಲ ವೀಕ್ಷಿಸಲು ಎಸ್.ಜೆ.ಎಂ ಡೆಂಟಲ್ ಕಾಲೇಜಿನಲ್ಲಿ ವಿಶೇಷ ಕಮಾಂಡ್ ಸೆಂಟರ್ ಆರಂಭಿಸಲಾಗಿದೆ. ಅಧಿಕಾರಿಗಳ ಸಂವಹನಕ್ಕಾಗಿ ಪ್ರತ್ಯೇಕ ಕಂಟ್ರೋಲ್ ರೂಂ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ 3 ಸೆಕ್ಟರಲ್ ಮ್ಯಾಜಿಸ್ಟ್ರೇಟ್ಗಳನ್ನು ನಿಯೋಜಿಸಲಾಗಿದೆ. ಹೆಚ್ಚಿನ ಶಬ್ದ ಹೊರಸೂಸುವ ಧ್ವನಿವರ್ಧಕಗಳು, ಪೇಪರ್ ಬ್ಲಾಸ್ಟಿಂಗ್ ಮತ್ತು ಪಟಾಕಿ ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಗರವನ್ನು 18 ಮೊಬೈಲ್ ಪೆಟ್ರೋಲಿಂಗ್ ಸೆಕ್ಟರ್ಗಳಾಗಿ ವಿಂಗಡಿಸಿ, ಗಡಿಭಾಗಗಳಲ್ಲಿ 9 ಚೆಕ್ಪೋಸ್ಟ್ಗಳನ್ನು ತೆರೆದು ತೀವ್ರ ತಪಾಸಣೆ ನಡೆಸಲಾಗುತ್ತಿದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











