Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶ ವಾಪಾಸ್ : ಸರ್ಕಾರದಿಂದ ಮಹತ್ವದ ಆದೇಶ

---Advertisement---

ಸುದ್ದಿಒನ್,ಬೆಂಗಳೂರು,ಮೇ.13: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ‘ಹಿಜಾಬ್’ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2022ರಲ್ಲಿ ಜಾರಿಗೆ ತರಲಾಗಿದ್ದ ಹಿಜಾಬ್ ನಿಷೇಧದ ಹಳೆಯ ಆದೇಶವನ್ನು ಅಧಿಕೃತವಾಗಿ ಹಿಂಪಡೆದಿರುವ ಸರ್ಕಾರ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ದಿನಾಂಕ 05.02.2022 ರಂದು ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶವು ವಿದ್ಯಾರ್ಥಿಗಳ ಸಾಂಪ್ರದಾಯಿಕ ನಂಬಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತಿನ ಜೊತೆಗೆ ವೈಯಕ್ತಿಕ ನಂಬಿಕೆಗಳಿಗೂ ಗೌರವ ನೀಡುವ ಸಮತೋಲಿತ ನಿಲುವನ್ನು ಸರ್ಕಾರ ಈಗ ತಳೆದಿದೆ.

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಸೆಕ್ಷನ್ 7 ಮತ್ತು 133(2) ರನ್ವಯ ಹಾಗೂ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮಗಳ ನಿರ್ಧಾರ ಇತ್ಯಾದಿ) ನಿಯಮಗಳು, 1995 ರ ನಿಯಮ 11 ರೊಂದಿಗೆ ಓದಿಕೊಂಡು, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ:

1. ಮೇಲೆ ಓದಲಾದ (4) ರ ಸರ್ಕಾರದ ಆದೇಶ ಸಂಖ್ಯೆ: ಇಪಿ 14 ಎಸ್ಹೆಚ್ಹೆಚ್ 2022, ದಿನಾಂಕ: 05.02.2022 ಅನ್ನು ಈ ಮೂಲಕ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

2. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿಪೂರ್ವ ಕಾಲೇಜುಗಳು, ಸಂಸ್ಥೆಯ ಅಗತ್ಯಗಳು ಮತ್ತು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಿಯಮಾನುಸಾರ ಸಮವಸ್ತ್ರವನ್ನು ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನು ಮುಂದುವರಿಸತಕ್ಕದ್ದು.

3. ವಿದ್ಯಾರ್ಥಿಗಳು ನಿಗದಿಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪುದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸಲು ಅನುಮತಿಸಲಾಗಿದೆ. ಆದರೆ, ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು. ಅದರ ಮೂಲ ಉದ್ದೇಶವನ್ನು

4. ಇಂತಹ ಅನುಮತಿಸಬಹುದಾದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ (Headscarf) ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಸೇರಿರಬಹುದು. ಆದರೆ, ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು.

5. ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ದತಿ ಆಧಾರಿತವಾದ ಸಂಕೇತಗಳು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ, ತರಗತಿ, ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.

6. ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿ ಸರ್ಕಾರವು ಅನುಮತಿಸಿರುವ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳತಕ್ಕದ್ದು.

7. ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ನಿಷ್ಪಕ್ಷಪಾತತೆಯಿಂದ ಕೂಡಿರಬೇಕು ಮತ್ತು ತಾರತಮ್ಯರಹಿತವಾಗಿರಬೇಕು. ಸಮಾನತೆ, ಘನತೆ, ಭ್ರಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರತಕ್ಕದ್ದು.

8. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (SDMC), ಕಾಲೇಜು ಅಭಿವೃದ್ಧಿ ಸಮಿತಿಗಳು (CDC), ಆಡಳಿತ ಮಂಡಳಿಗಳು, ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಯಾವುದೇ ವಿದ್ಯಾರ್ಥಿಯನ್ನು ತಾರತಮ್ಯ ಧೋರಣೆಯಿಂದ, ಅವಮಾನಕಾರಿ ವರ್ತನೆಯ ಮೂಲಕ ಬಳಲುವಂತೆ ಮಾಡಬಾರದು. ಈ ಎಲ್ಲ ಸಂಸ್ಥೆಗಳು ಬಸವಣ್ಣನವರು ಹೇಳಿದಂತೆ “ಇವ ನಮ್ಮವ” ಎಂಬ ಉದಾತ್ತವಾದ ಒಳಗೊಳ್ಳುವ ನಿಲುವನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಯಾವುದೇ ವಿದ್ಯಾರ್ಥಿಯ ಶಿಕ್ಷಣವು ನಿರಾಕರಣೆ ಆಗದ ರೀತಿಯಲ್ಲಿ ಸಂಸ್ಥೆಯು ಶಿಸ್ತು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

9. ಈ ಆದೇಶಕ್ಕೆ ವಿರುದ್ಧವಾಗಿರುವ ಯಾವುದೇ ಸುತ್ತೋಲೆ, ನಿರ್ಣಯ, ಸೂಚನೆ, ರೂಢಿ ಅಥವಾ ಸಂಸ್ಥೆಯ ನಿರ್ದೇಶನಗಳು ಅನೂರ್ಜಿತವಾಗತಕ್ಕದ್ದು.

10. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಈ ಆದೇಶದ ಅನುಷ್ಠಾನಕ್ಕಾಗಿ ಅಗತ್ಯ ನಿರ್ದೇಶನಗಳನ್ನು ಹೊರಡಿಸತಕ್ಕದ್ದು.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now