ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲಾ ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಿಚಾರಣೆ ಆರಂಭಿಸಿದೆ.
ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದರೆ, ಸಿಬಿಐ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಸ್. ನಾಗಮುತ್ತು ತಮ್ಮ ವಾದವನ್ನು ಮಂಡಿಸಿದರು. ಪ್ರಕರಣದಲ್ಲಿ ಒಟ್ಟು 7 ಸಾಕ್ಷಿಗಳು ಇದ್ದರೂ, ನಂತರ ಅವರು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿರುವುದನ್ನು ರಕ್ಷಣಾ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಈ ಮೇಲ್ಮನವಿ ಮೊದಲ ಬಾರಿಗೆ ವಿಚಾರಣೆಗೆ ಬಂದಿರುವುದರಿಂದ, ಸಿಬಿಐ ಪರ ವಾದವೂ ಕೇಳಬೇಕಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. 680 ಪುಟಗಳ ತೀರ್ಪನ್ನು ಅಧ್ಯಯನ ಮಾಡಲು ಸಮಯ ಬೇಕೆಂದು ಹೇಳಿ ಸಿಬಿಐ ಪರ ವಕೀಲರು 4 ವಾರಗಳ ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಹೈಕೋರ್ಟ್ ವಿಭಾಗೀಯ ಪೀಠ ಮೇಲ್ಮನವಿಯನ್ನು ಪ್ರಾಥಮಿಕ ಹಂತದಲ್ಲಿ ಸ್ವೀಕರಿಸಿದ್ದು, ವಿಚಾರಣಾ ನ್ಯಾಯಾಲಯದ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ. ಇದೇ ವೇಳೆ, ರಜಾ ಕಾಲದ ಪೀಠದಲ್ಲಿ ಮೇಲ್ಮನವಿಯನ್ನು ವಿಚಾರಣೆಗೊಳಪಡಿಸಲು ಸಹ ನ್ಯಾಯಾಲಯ ತಾತ್ವಿಕವಾಗಿ ಒಪ್ಪಿಕೊಂಡಿದೆ.ತಕ್ಷಣ ಶಿಕ್ಷೆಗೆ ಸ್ಥಗಿತ (ಸ್ಟೇ) ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ವಿನಯ್ ಕುಲಕರ್ಣಿಗೆ ಇದರಿಂದ ಹಿನ್ನಡೆ ಉಂಟಾಗಿದೆ. ಈಗಾಗಲೇ ಶಾಸಕರ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಅವರಿಗೆ, ಸ್ಟೇ ಸಿಗದಿರುವುದು ರಾಜಕೀಯ ಹಾಗೂ ಕಾನೂನು ಹಿನ್ನಲೆಯಲ್ಲಿ ಒತ್ತಡ ಹೆಚ್ಚಿಸಿದೆ.
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ವಿನಯ್ ಕುಲಕರ್ಣಿಯ ಭವಿಷ್ಯ ಮುಂದಿನ ವಿಚಾರಣೆಯ ಮೇಲೆ ಅವಲಂಬಿತವಾಗಿದ್ದು, ಮಧ್ಯಂತರ ಆದೇಶ ಯಾವ ರೀತಿಯಲ್ಲಿ ಬರುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.



















