ಕೋವಿಡ್ 4ನೇ ಬರುತ್ತಾ.. ಆರೋಗ್ಯ ಸಚಿವರು ಹೇಳಿದ್ದೇನು..? ಮಾಸ್ಕ್ ಕಡ್ಡಾಯ ಅಂದಿದ್ದೇಕೆ..?

suddionenews
2 Min Read

ಬೆಂಗಳೂರು: ಚೀನಾ, ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್ ಸೇರಿದಂತೆ ಎಂಟು ದೇಶಗಳಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿದ್ದು, ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಆರೋಗ್ಯ ಸೌಧದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದ ಅವರು, ಎಂಟು ದೇಶಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಕಂಡುಬಂದಿದೆ. ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್, ಚೀನಾ ದೇಶಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಹೆಚ್ಚಿದೆ. ಜರ್ಮನಿ, ಯುಕೆಯಲ್ಲೂ ಸೋಂಕು ಹೆಚ್ಚಾಗಿದೆ. ಇಲ್ಲಿ ಎಕ್ಸ್ಇ ಹಾಗೂ ಎಂಇ ಎಂಬ ಹೊಸ ವೈರಾಣು ಪ್ರಭೇದಗಳು ಕಂಡುಬಂದಿವೆ. ದೇಶದಲ್ಲಿ ನವದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಇದಕ್ಕಾಗಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದೆ. ಈ 8 ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇರಿಸಬೇಕಿದೆ. ಆ ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ ಮಾಡುವುದು, ಅವರು ಮನೆಗೆ ತೆರಳಿದ ಬಳಿಕ ಒಂದು ವಾರ ಅಥವಾ ಹತ್ತು ದಿನ ಟೆಲಿ ಮಾನಿಟರಿಂಗ್ ಮಾಡುವುದು, ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವುದು, ಸುಮಾರು 5 ಸಾವಿರ ಮಕ್ಕಳಿಗೆ ಪರೀಕ್ಷೆ ಮಾಡುವುದು ಮೊದಲಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.

ಅನೇಕರು ಮಾಸ್ಕ್ ಬಳಸುತ್ತಿಲ್ಲ. ಜೂನ್-ಜುಲೈ ತಿಂಗಳಲ್ಲಿ ನಾಲ್ಕನೇ ಅಲೆ ಬರಬಹುದು ಎಂದು ಕಾನ್ಪುರ ಐಐಟಿ ತಿಳಿಸಿದೆ. ಆದ್ದರಿಂದ ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಇದಲ್ಲದೆ, 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್ ಪಡೆಯಬೇಕಿದೆ. ಜೊತೆಗೆ ಇನ್ನೂ ಶೇ.2 ರಷ್ಟು ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಮೊದಲ ಡೋಸ್ ನಲ್ಲಿ 102% (4.97 ಕೋಟಿ ), ಎರಡನೇ ಡೋಸ್ ನಲ್ಲಿ 98% (4.77 ಕೋಟಿ) ಪ್ರಗತಿಯಾಗಿದೆ. ಇನ್ನೂ 32 ಲಕ್ಷ ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಇದು ಬಹಳ ನಿರ್ಲಕ್ಷ್ಯದ ಸಂಗತಿಯಾಗಿದ್ದು, ಯಾರೂ ಉದಾಸೀನ ತೋರಬಾರದು ಎಂದರು.

ಕೆಲ ಆಸ್ಪತ್ರೆಗಳಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡಿರುವುದರ ಬಗ್ಗೆ ದೂರುಗಳು ಬಂದಿತ್ತು. ಇದಕ್ಕೆ ಕಡಿವಾಣ ಹಾಕಬೇಕೆಂಬುದು ಸರ್ಕಾರದ ಉದ್ದೇಶ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದ್ದು, ಸಮಿತಿ ರಚಿಸಲಾಗುವುದು. ಸಿಟಿ ಸ್ಕ್ಯಾನ್, ಎಂಆರ್ ಐ, ಸ್ಕ್ಯಾನಿಂಗ್ ಮೊದಲಾದವುಗಳ ದರ ಪರಿಷ್ಕರಣೆಯನ್ನು ಮಾಡಲಾಗಿದ್ದು, ಇದನ್ನು ಕೋವಿಡ್ ಸಂದರ್ಭದಲ್ಲಿ ಮಾತ್ರ ಎಂದು ಪರಿಗಣಿಸದೆ ಹೊಸ ದರವೆಂದು ಪರಿಗಣಿಸಬೇಕೆಂದು ಆಯುಕ್ತರಿಗೆ ಸೂಚಿಸಲಾಗಿದೆ. ಇದಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಆಸ್ಪತ್ರೆಯ ಪರವಾನಗಿ ಕೂಡ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *