ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಅನ್‌ಲಾಕ್ ಮಾಡುವುದರಿಂದ ಹಿಡಿದು, ಬ್ಯಾಂಕಿಂಗ್ ಸೇವೆಗಳು ಹಾಗೂ ಆನ್ ಲೈನ್ ನಲ್ಲಿ ಗುರುತು ದೃಢೀಕರಿಸುವವರೆಗೆ ‘ಬಯೋಮೆಟ್ರಿಕ್ ಅಥೆಂಟಿಕೇಶನ್’ (ಬೆರಳಚ್ಚು, ಮುಖದ ಗುರುತು ಮತ್ತು ಐರಿಸ್ ಸ್ಕ್ಯಾನ್) ಅತ್ಯಂತ ಸಾಮಾನ್ಯವಾಗಿದೆ. ಆದರೆ, ಇದೇ ನಮಗೆ ಶ್ರೀರಕ್ಷೆಯಾಗಿರುವ ಬಯೋಮೆಟ್ರಿಕ್ ಡೇಟಾ ಅಷ್ಟೇ ಸೂಕ್ಷ್ಮ ಮತ್ತು ಅಪಾಯಕಾರಿ ಕೂಡ ಹೌದು.
ಒಂದು ವೇಳೆ ನಿಮ್ಮ ಪಾಸ್‌ವರ್ಡ್ ಹ್ಯಾಕ್ ಆದಲ್ಲಿ ಅದನ್ನು ತಕ್ಷಣವೇ ಬದಲಾಯಿಸಬಹುದು. ಆದರೆ ನಿಮ್ಮ ಬೆರಳಚ್ಚು ಅಥವಾ ಮುಖದ ಚಹರೆಯನ್ನು ಬದಲಾಯಿಸಲು ಸಾಧ್ಯವೇ? ಖಂಡಿತ ಇಲ್ಲ. ಒಮ್ಮೆ ಬಯೋಮೆಟ್ರಿಕ್ ಡೇಟಾ ದುರುಪಯೋಗವಾದರೆ ಅದನ್ನು ಸರಿಪಡಿಸುವುದು ಅತ್ಯಂತ ಕಷ್ಟದ ಕೆಲಸ. ನಮ್ಮ ಡೇಟಾವನ್ನು ಸಂಗ್ರಹಿಸುವ ಸಂಸ್ಥೆಗಳಿಗೆ ಅದನ್ನು ರಕ್ಷಿಸುವ ಜವಾಬ್ದಾರಿ ಇದ್ದೇ ಇರುತ್ತದೆ. ಆದಾಗ್ಯೂ, ವೈಯಕ್ತಿಕ ಮಟ್ಟದಲ್ಲಿ ಕೆಲವು ಸ್ಮಾರ್ಟ್ ಭದ್ರತಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಈ ಡಿಜಿಟಲ್ ಅಪಾಯದಿಂದ ಪಾರಾಗಬಹುದು.
ಎಲ್ಲೆಂದರಲ್ಲಿ ಬಯೋಮೆಟ್ರಿಕ್ ಬಳಸಬೇಡಿ:
ಯಾವುದೇ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಆನ್‌ಲೈನ್ ಆಪ್‌ಗಳಲ್ಲಿ ಬಯೋಮೆಟ್ರಿಕ್ ಫೀಚರ್ ಆನ್ ಮಾಡುವ ಮುನ್ನ, ಆ ಆಪ್‌ನ ಗೌಪ್ಯತಾ ನೀತಿಯನ್ನು (Privacy Policy) ಒಮ್ಮೆ ಓದಿ. ನಿಮ್ಮ ಬಯೋಮೆಟ್ರಿಕ್ ಡೇಟಾ ಅವರಿಗೆ ಏಕೆ ಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ. ಕೇವಲ ನಂಬಿಕಸ್ಥ ಸಾಧನಗಳು ಹಾಗೂ ಪ್ರತಿಷ್ಠಿತ ಸೇವೆಗಳಲ್ಲಿ ಮಾತ್ರ ಇದನ್ನು ಬಳಸುವುದು ನಿಮ್ಮ ಮಾಹಿತಿಯ ಸೋರಿಕೆಯನ್ನು ತಡೆಯುತ್ತದೆ.
ಸಾಧನಗಳ ಸುರಕ್ಷತೆ ಅತ್ಯಗತ್ಯ:
ಬಯೋಮೆಟ್ರಿಕ್ ಡೇಟಾವನ್ನು ಸಂಗ್ರಹಿಸಿಡುವ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿಡುವುದು ನಿಮ್ಮ ಮೊದಲ ಕರ್ತವ್ಯ. ಇದಕ್ಕಾಗಿ ಫೋನ್ ಸಾಫ್ಟ್‌ವೇರ್ ಮತ್ತು ಸೆಕ್ಯೂರಿಟಿ ಅಪ್ಡೇಟ್‌ಗಳನ್ನು ಕಾಲಕಾಲಕ್ಕೆ ಇನ್‌ಸ್ಟಾಲ್ ಮಾಡುತ್ತಿರಿ. ಅಪ್ಡೇಟ್‌ಗಳು ನಿಮ್ಮ ಸಾಧನದ ಭದ್ರತಾ ಲೋಪಗಳನ್ನು ಸರಿಪಡಿಸುತ್ತವೆ. ಬಯೋಮೆಟ್ರಿಕ್ ಜೊತೆಗೆ ಯಾವಾಗಲೂ ಬಲಿಷ್ಠವಾದ ಪಾಸ್‌ಕೋಡ್ ಅಥವಾ ಪಾಸ್‌ವರ್ಡ್ ಅನ್ನು ಪರ್ಯಾಯವಾಗಿ ಇಟ್ಟುಕೊಳ್ಳಿ.
ಅಪರಿಚಿತ ಲಿಂಕ್, ಆಪ್‌ಗಳ ಬಗ್ಗೆ ಇರಲಿ ಎಚ್ಚರ:
ಅಪರಿಚಿತ ವೆಬ್‌ಸೈಟ್‌ಗಳು ಅಥವಾ ಸಂಶಯಾಸ್ಪದ ಅಪ್ಲಿಕೇಶನ್‌ಗಳೊಂದಿಗೆ ನಿಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬೇಡಿ. ಸೈಬರ್ ಅಪರಾಧಿಗಳು ಇಂತಹ ವಿವರಗಳನ್ನು ಕದ್ದು ವಂಚನೆಗೆ ಬಳಸುತ್ತಾರೆ. ಆಪ್‌ಗಳನ್ನು ಯಾವಾಗಲೂ ಅಧಿಕೃತ ಆಪ್ ಸ್ಟೋರ್‌ಗಳಿಂದಲೇ ಡೌನ್‌ಲೋಡ್ ಮಾಡಿ ಮತ್ತು ಅವು ಕೇಳುವ ‘ಪರ್ಮಿಷನ್’ಗಳನ್ನು ಗಮನಿಸಿ.
ಪಬ್ಲಿಕ್ ವೈ-ಫೈ ಬಳಸುವಾಗ ಜಾಗರೂಕರಾಗಿರಿ:
ಬ್ಯಾಂಕಿಂಗ್ ಅಥವಾ ಸೂಕ್ಷ್ಮ ಖಾತೆಗಳನ್ನು ಬಳಸುವಾಗ ಸಾರ್ವಜನಿಕವಾಗಿ ಸಿಗುವ ಉಚಿತ ವೈ-ಫೈ ಬಳಸುವುದನ್ನು ತಪ್ಪಿಸಿ. ಒಂದು ವೇಳೆ ಅನಿವಾರ್ಯವಾದರೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಿ. ನಿಮ್ಮ ಎಲ್ಲಾ ಪ್ರಮುಖ ಖಾತೆಗಳಿಗೆ ‘ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್’ (MFA) ಸಕ್ರಿಯಗೊಳಿಸಿ. ಇದು ನಿಮ್ಮ ಪಾಸ್‌ವರ್ಡ್ ಲೀಕ್ ಆದರೂ ಖಾತೆಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. ನಿಯಮಿತವಾಗಿ ನಿಮ್ಮ ಖಾತೆಗಳ ಚಟುವಟಿಕೆಯನ್ನು ಪರಿಶೀಲಿಸುತ್ತಿರಿ.
ವಂಚನೆಯ ಯತ್ನಗಳನ್ನು ಗುರುತಿಸಿ:
ನಿಮ್ಮ ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೇಳಿ ಬರುವ ಇಮೇಲ್, ಟೆಕ್ಸ್ಟ್ ಮೆಸೇಜ್ ಅಥವಾ ಫೋನ್ ಕರೆಗಳ ಬಗ್ಗೆ ತೀರಾ ಜಾಗರೂಕರಾಗಿರಿ. ಯಾವುದೇ ಅಧಿಕೃತ ಸಂಸ್ಥೆಗಳು ನಿಮ್ಮ ಸೂಕ್ಷ್ಮ ಭದ್ರತಾ ವಿವರಗಳನ್ನು ಇಂತಹ ಕರೆ ಅಥವಾ ಸಂದೇಶಗಳ ಮೂಲಕ ಕೇಳುವುದಿಲ್ಲ. ನಿಮ್ಮ ಖಾತೆಗೆ ಅನಧಿಕೃತ ಪ್ರವೇಶವಾಗಿದೆ ಎಂದು ತಿಳಿದ ತಕ್ಷಣವೇ ಸಂಬಂಧಪಟ್ಟ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಿ.
ಬಯೋಮೆಟ್ರಿಕ್ ತಂತ್ರಜ್ಞಾನವು ಡಿಜಿಟಲ್ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ ನಿಜ, ಆದರೆ ಇದೊಂದನ್ನೇ ನಂಬಿ ಕೂರಲು ಸಾಧ್ಯವಿಲ್ಲ. ಒಟ್ಟಾರೆ ಡಿಜಿಟಲ್ ಸುರಕ್ಷತೆಯ ಭಾಗವಾಗಿ ಸ್ಮಾರ್ಟ್ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಮಾತ್ರ ಗುರುತಿನ ಕಳ್ಳತನ ಮತ್ತು ಸೈಬರ್ ವಂಚನೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.





















