ಸುಮಾರು ಜನಕ್ಕೆ ತಲೆ ಸುತ್ತು, ಹುಳಿ ತೇಗು, ಆಗಾಗ ವಾಂತಿ ಬಂದಂತೆ ಆಗುವುದು ಆಗ್ತಾ ಇರುತ್ತೆ. ಅದಕ್ಕೆಲ್ಲಾ ಕಾರಣ ಪಿತ್ತ ಆಗಿರುವುದು. ಪಿತ್ತ ಅಲ್ವಾ ಆದ್ರೆ ಆಗ್ಲಿ, ಹೋದ್ರೆ ಹೋಗ್ಲಿ ಅಂತ ಸುಮ್ಮನೆ ಬಿಡುವಂತದ್ದು ಅಲ್ಲ. ಪಿತ್ತವನ್ನು ನೆಗ್ಲೆಕ್ಟ್ ಮಾಡಿದ್ರೆ ಇನ್ನಷ್ಟು ಬೇರೆ ಬೇರೆ ಕಾಯಿಲೆಗಳಿಗೆ ತಿರುಗುತ್ತಾ ಬರುತ್ತದೆ. ಹೀಗಾಗಿಯೇ ಯಾವುದೆ ಆರೋಗ್ಯ ಸಮಸ್ಯೆಯಾಗಲೀ ಅದನ್ನು ಆದಷ್ಟು ಬೇಗ ಸರಿ ಮಾಡಿಕೊಳ್ಳಬೇಕು.
ಅದರಲ್ಲೂ ಪಿತ್ತ ಆದರೆ ಊಟ ಮಾಡುವುದಕ್ಕೂ ಜಿಗುಪ್ಸೆ ಬಂದಂಗೆ ಆಗುತ್ತಾ ಇರುತ್ತದೆ. ಯಾವಾಗಲು ವಾಂತಿ ರೀತಿ ಫೀಲ್ ಆದರೆ ಊಟ ಸೇರುವುದಾದರೂ ಹೇಗೆ. ಪಿತ್ತ ಜಾಸ್ತಿಯಾದಷ್ಟೂ ಗ್ಯಾಸ್ಟ್ರಿಕ್ ಸಮಸ್ಯೆಯೂ ನಮ್ಮನ್ನು ಕಾಡಬಹುದು. ಹೀಗಾಗಿಯೇ ಆರೋಗ್ಯವನ್ನು ಆದಷ್ಟು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಇತ್ತಿಚಿನ ಲೈಫ್ ಸ್ಟೈಲ್ ನಿಂದಾಗಿಯೇ ನೂರೆಂಟು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಈ ಪಿತ್ತದ ಸಮಸ್ಯೆಗೆ ಮನೆ ಮದ್ದಿನಿಂದಾನೇ ಪರಿಹಾರ ಕಂಡುಕೊಳ್ಳಬಹುದು.
ಅಡುಗೆ ಮನೆಯಲ್ಲಿರುವಂತ ಪದಾರ್ಥವನ್ನೇ ಬಳಸಿ ಮೊದಲಿಗೆ ಒಂದು ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೇ ಹಣ್ಣನ್ನು ತೆಗೆದುಕೊಳ್ಳಿ. ಸ್ವಲ್ಪ ನೀರಿನಲ್ಲಿ ಅದನ್ನು ನೆನೆಸಿಡಿ. ಬಳಿಕ ಅದನ್ನು ಕೈಯಲ್ಲಿ ಕಿವುಚಿ, ರಸ ಮಾಡಿಕೊಳ್ಳಿ. ಒಂದು ಲೋಟಕ್ಕೆ ಆ ಹುಣಸೇ ರಸವನ್ನ ಜಾಲರದ ಮೂಲಕ ಸೋಸಿಕೊಳ್ಳಿ. ಯಾಕಂದ್ರೆ ಕೆಲವೊಂದು ಸಲ ಹುಣಸೇ ಹಣ್ಣಿನಲ್ಲಿ ಸಣ್ಣ ಸಣ್ಣ ಗಲೀಜು ಸೇರಿಕೊಂಡಿರುತ್ತದೆ. ಸೋಸಿಕೊಂಡ ರಸಕ್ಕೆ ಒಂದಷ್ಟು ನೀರನ್ನು ಬೆರೆಸಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಿರಿ, ನಿಮ್ಮ ಪಿತ್ತದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಒಮ್ಮೆ ವೈದ್ಯರ ಬಳಿಯೂ ನಿಮ್ಮ ಪಿತ್ತದ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಿ.