ಪ್ರವಾಸ ಕೈಗೊಳ್ಳುವುದು ಎಲ್ಲರಿಗೂ ಇಷ್ಟವಾದರೂ, ಅದಕ್ಕೆ ತಗಲುವ ವೆಚ್ಚ ಹಲವರನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ವಿಮಾನ ದರ, ಹೋಟೆಲ್ ವಾಸ, ಊಟೋಪಚಾರ ಮತ್ತು ಸ್ಥಳೀಯ ಸಾರಿಗೆ ವೆಚ್ಚಗಳು ವಿಶೇಷವಾಗಿ ಪ್ರವಾಸಿ ಋತುವಿನಲ್ಲಿ (Peak Season) ಬಜೆಟ್ ಅನ್ನು ಮೀರುವಂತೆ ಮಾಡುತ್ತವೆ. ಆದರೆ, ಸೂಕ್ತ ಯೋಜನೆಯೊಂದಿಗೆ ಪ್ರಯಾಣಿಸಿದರೆ ಕಡಿಮೆ ಖರ್ಚಿನಲ್ಲೇ ಪ್ರವಾಸವನ್ನು ಅದ್ಭುತವಾಗಿಸಿಕೊಳ್ಳಬಹುದು. ದೇಶ-ವಿದೇಶ ಪ್ರವಾಸದ ವೇಳೆ ಹಣ ಉಳಿತಾಯ ಮಾಡಲು ಪ್ರವಾಸ ತಜ್ಞರು ನೀಡಿರುವ 10 ಪ್ರಮುಖ ಸಲಹೆಗಳು ಇಲ್ಲಿವೆ:
ವಿಮಾನ ದರಗಳ ಹೋಲಿಕೆ ಮಾಡಿ

ಕಂಡ ತಕ್ಷಣವೇ ಮೊದಲ ವಿಮಾನದ ಟಿಕೆಟ್ ಬುಕ್ ಮಾಡಬೇಡಿ. ವಿವಿಧ ವಿಮಾನಯಾನ ಸಂಸ್ಥೆಗಳ ದರಗಳನ್ನು ಮತ್ತು ದಿನಾಂಕಗಳನ್ನು ಪರಿಶೀಲಿಸಿ. ಪ್ರಯಾಣದ ದಿನಾಂಕದಲ್ಲಿ ಒಂದೆರಡು ದಿನ ಹೊಂದಾಣಿಕೆ ಮಾಡಿಕೊಂಡರೆ ಕಡಿಮೆ ದರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ರಶ್ ಇಲ್ಲದ ಸಮಯದಲ್ಲಿ ಪ್ರಯಾಣಿಸಿ (Off-Peak)
ಶಾಲಾ ರಜೆಗಳು, ಹಬ್ಬದ ದಿನಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರವಾಸಿ ತಾಣಗಳಲ್ಲಿ ವಿಪರೀತ ದರಗಳಿರುತ್ತವೆ. ನಿಮ್ಮ ಸಮಯಾವಕಾಶಕ್ಕೆ ತಕ್ಕಂತೆ ಪ್ರವಾಸಿಗರ ದಟ್ಟಣೆ ಕಡಿಮೆ ಇರುವ ದಿನಗಳಲ್ಲಿ (Off-season) ಪ್ರಯಾಣಿಸಿದರೆ ವಿಮಾನ ಟಿಕೆಟ್ ಮತ್ತು ಹೋಟೆಲ್ ರೂಮ್ಗಳು ಅಗ್ಗದ ದರದಲ್ಲಿ ಲಭ್ಯವಾಗುತ್ತವೆ.
ಜಾಣ್ಮೆಯಿಂದ ವಸತಿ ಆಯ್ಕೆ ಮಾಡಿ
ಪ್ರವಾಸಕ್ಕೆ ಹೋಟೆಲ್ಗಳೇ ಏಕೈಕ ಆಯ್ಕೆಯಲ್ಲ. ಹೋಮ್ಸ್ಟೇ, ಗೆಸ್ಟ್ಹೌಸ್, ಹಾಸ್ಟೆಲ್ ಅಥವಾ ಅಪಾರ್ಟ್ಮೆಂಟ್ಗಳ ದರಗಳನ್ನು ಹೋಲಿಸಿ ನೋಡಿ. ಬುಕ್ ಮಾಡುವ ಮುನ್ನ ಉಚಿತ ಉಪಾಹಾರ, ವೈ-ಫೈ ಮುಂತಾದ ಸೌಲಭ್ಯಗಳು ಲಭ್ಯವಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಸಾರ್ವಜನಿಕ ಸಾರಿಗೆಯನ್ನು ಬಳಸಿ
ಪ್ರವಾಸಿ ತಾಣಗಳಲ್ಲಿ ಟ್ಯಾಕ್ಸಿ ಅಥವಾ ಖಾಸಗಿ ವಾಹನಗಳ ಬಾಡಿಗೆ ಹೆಚ್ಚು ವೆಚ್ಚದಾಯಕವಾಗಿರುತ್ತದೆ. ಇದಕ್ಕೆ ಬದಲಾಗಿ ಸ್ಥಳೀಯ ರೈಲು, ಬಸ್ ಮತ್ತು ಮೆಟ್ರೋ ವ್ಯವಸ್ಥೆಯನ್ನು ಬಳಸಿದರೆ ಹಣ ಉಳಿಯುವುದಲ್ಲದೆ, ಊರಿನ ನೈಜ ಪರಿಚಯವೂ ಆಗುತ್ತದೆ.
ದಿನದ ಖರ್ಚಿಗೆ ಮಿತಿ ನಿಗದಿಪಡಿಸಿ
ಪ್ರವಾಸ ಆರಂಭಿಸುವ ಮುನ್ನವೇ ವಾಸ್ತವಿಕ ಬಜೆಟ್ ಸಿದ್ಧಪಡಿಸಿಕೊಳ್ಳಿ. ಆಹಾರ, ಸಾರಿಗೆ ಮತ್ತು ಶಾಪಿಂಗ್ಗೆ ಇಂತಿಷ್ಟೇ ಹಣ ಎಂದು ದಿನದ ಮಿತಿಯನ್ನು ನಿಗದಿ ಮಾಡಿ. ದಿನನಿತ್ಯದ ಖರ್ಚಿನ ಮೇಲೆ ನಿಗಾ ಇರಿಸುವುದರಿಂದ ಬಜೆಟ್ ಕೈಮೀರುವುದನ್ನು ತಡೆಯಬಹುದು.
ಮರುಬಳಕೆಯ ವಸ್ತುಗಳನ್ನು ಜೊತೆಯಲ್ಲಿಡಿ
ಪ್ರತಿದಿನ ನೀರಿನ ಬಾಟಲಿ, ಸಣ್ಣಪುಟ್ಟ ತಿಂಡಿಗಳನ್ನು ಪದೇಪದೇ ಖರೀದಿಸುವುದು ಖರ್ಚನ್ನು ಹೆಚ್ಚಿಸುತ್ತದೆ. ಮನೆಯಿಂದಲೇ ನೀರಿನ ಬಾಟಲಿ ಮತ್ತು ಅಗತ್ಯ ವಸ್ತುಗಳನ್ನು ಕೊಂಡೊಯ್ಯುವುದರಿಂದ ಹಣ ಉಳಿತಾಯವಾಗುತ್ತದೆ.
ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ
ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡ ದೊಡ್ಡ ರೆಸ್ಟೋರೆಂಟ್ಗಳಲ್ಲಿ ಆಹಾರ ದುಬಾರಿಯಾಗಿರುತ್ತದೆ. ಅದರ ಬದಲಿಗೆ ಸ್ಥಳೀಯ ಸಣ್ಣ ಹೋಟೆಲ್ಗಳು ಮತ್ತು ಮಾರುಕಟ್ಟೆಗಳಲ್ಲಿ ಸಿಗುವ ಆಹಾರವನ್ನು ಸೇವಿಸಿ. ಇದು ವೆಚ್ಚವನ್ನು ತಗ್ಗಿಸುವುದರ ಜೊತೆಗೆ ಆಯಾ ಊರಿನ ಅಪ್ಪಟ ರುಚಿಯನ್ನು ಸವಿಯಲು ನೆರವಾಗುತ್ತದೆ.
ಉಚಿತ ಪ್ರವಾಸಿ ತಾಣಗಳನ್ನು ಹುಡುಕಿ
ಎಲ್ಲಾ ವೀಕ್ಷಣಾ ಸ್ಥಳಗಳಿಗೂ ಪ್ರವೇಶ ಶುಲ್ಕವಿರುವುದಿಲ್ಲ. ಉದ್ಯಾನವನಗಳು, ಸಮುದ್ರ ತೀರಗಳು, ನಡಿಗೆ ಮಾರ್ಗಗಳು ಮತ್ತು ಕೆಲವು ವಸ್ತುಸಂಗ್ರಹಾಲಯಗಳಿಗೆ ಉಚಿತ ಪ್ರವೇಶವಿರುತ್ತದೆ. ಪ್ರವಾಸದ ಪಟ್ಟಿ ಮಾಡುವಾಗ ಇಂತಹ ತಾಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ.
ಹೆಚ್ಚುವರಿ ಲಗೇಜ್ ಶುಲ್ಕ ತಪ್ಪಿಸಿ
ವಿಮಾನ ಪ್ರಯಾಣದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಲಗೇಜ್ ತೂಕವಿದ್ದರೆ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಹಾಗಾಗಿ ಪ್ರಯಾಣಕ್ಕೆ ಹೊರಡುವ ಮುನ್ನ ಸಂಸ್ಥೆಯ ನಿಯಮಗಳನ್ನು ಪರಿಶೀಲಿಸಿ, ಅತಿಯಾದ ತೂಕವಿಲ್ಲದಂತೆ ನೋಡಿಕೊಳ್ಳಿ.
ಕರೆನ್ಸಿ ವಿನಿಮಯ ದರಗಳ ಮೇಲೆ ನಿಗಾ ಇರಲಿ
ವಿದೇಶ ಪ್ರವಾಸ ಕೈಗೊಳ್ಳುವಾಗ ಕರೆನ್ಸಿ ಪರಿವರ್ತನೆ ಮತ್ತು ಬ್ಯಾಂಕ್ ಕಾರ್ಡ್ಗಳ ಶುಲ್ಕದ ಬಗ್ಗೆ ಮೊದಲೇ ಮಾಹಿತಿ ಇರಲಿ. ವಿಮಾನ ನಿಲ್ದಾಣಗಳಲ್ಲಿ ಕರೆನ್ಸಿ ವಿನಿಮಯ ಮಾಡಿಕೊಳ್ಳುವುದರಿಂದ ಹೆಚ್ಚಿನ ಕಮಿಷನ್ ನೀಡಬೇಕಾಗಬಹುದು; ಆದ್ದರಿಂದ ವಿಶ್ವಾಸಾರ್ಹ ಹಣಕಾಸು ಸಂಸ್ಥೆಗಳ ಮೂಲಕ ಮುಂಚಿತವಾಗಿಯೇ ವಿನಿಮಯ ಮಾಡಿಕೊಳ್ಳುವುದು ಸೂಕ್ತ.















