ಬಳ್ಳಾರಿ: ದಿನವಿಡೀ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆಯೆಲ್ಲಾ ನೀರಿಗೆ ಆಹುತಿಯಾಗುತ್ತಿದೆ. ಈಗಾಗಲೇ ರೈತರ ಬೆಳೆಯೆಲ್ಲಾ ಹೊಲದಲ್ಲಿ ಮಲಗಿದೆ. ಎಷ್ಟೋ ರೈತರ ಜಮೀನಲ್ಲಿ ನೀರು ತುಂಬಿ ಕೈಗೆ ಬರಬೇಕಿದ್ದ ಫಸಲು ಅಲ್ಲಿಯೇ ಕೊಳೆಯುತ್ತಿದೆ. ಈಗ ರೈತರೊಬ್ಬರ ಮೆಣಸಿನಕಾಯಿ ನೀರು ಪಾಲಾಗಿದೆ.
ಜಿಲ್ಲೆಯ ಕುರಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸುಮಾರು 9 ಲಕ್ಷಕ್ಕೂ ಅಧಿಕ ಮೌಲ್ಯದ ಮೆಣಸಿನಕಾಯಿ ಬೆಳೆ ನೀರು ಪಾಲಾಗಿದ್ದು, ಬೆಳೆ ಬೆಳೆದ ರೈತ ತಲೆ ಮೇಲೆ ಕೈ ಹೊತ್ತು ಕುಳಿತಂತಾಗಿದೆ.
ಗ್ರಾಮದ ರೈತರು ಮೆಣಸಿನಕಾಯಿಯನ್ನ ಕಟಾವು ಮಾಡಿದ್ದಾರೆ. ಆ ಬಳಿಕ ಒಣಗಲು ಪಾಂಡುರಂಗ ದೇವಾಲಯದ ಆವರಣದಲ್ಲಿ ಹಾಕಲಾಗಿದೆ. ಮೂವತ್ತಕ್ಕೂ ಹೆಚ್ಚು ರೈತರು ಮೆಣಸಿನ ಕಾಯಿ ಬೆಳೆಯನ್ನೇ ನಂಬಿದ್ದರು. ಸರಿಯಾದ ಸಮಯಕ್ಕೆ ಕಟಾವು ಮಾಡಿ, ಮಾರಾಟ ಮಾಡಲು ಒಣಗಲು ಹಾಕಿದ್ದರು. ಆದ್ರೆ ವರುಣರಾಯ ಅಲ್ಲಿಯೂ ಬಿಡಲಿಲ್ಲ. ನಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಒಣಗಲು ಹಾಕಿದ್ದ ಮೆಣಸಿನಕಾಯಿ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ರೈತ ಮುಂದೆ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾನೆ.