ಸುದ್ದಿಒನ್ : ಚಹಾ ಮತ್ತು ಕಾಫಿ ಭಾರತದಲ್ಲಿ ಅತ್ಯಂತ ಜನಪ್ರಿಯ ಕೆಫೀನ್ ಹೊಂದಿರುವ ಪಾನೀಯಗಳಾಗಿವೆ. ಬೆಳಿಗ್ಗೆ ಎದ್ದ ತಕ್ಷಣವೇ ಅನೇಕರಿಗೆ ಚಹಾ ಮತ್ತು ಕಾಫಿ ಕುಡಿಯದೇ ಅಂದಿನ ದಿನ ಪ್ರಾರಂಭವಾಗುವುದೇ ಇಲ್ಲ. ಕೆಲವರು ದಿನಕ್ಕೆ ಮೂರು ನಾಕು ಸಾರಿ ಕುಡಿಯದೆ ಇರುವುದಿಲ್ಲ. ರಸ್ತೆಗಳ ಉದ್ದಕ್ಕೂ ಮತ್ತು ಬೀದಿಯ ಕೊನೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಇರುವ ಅನೇಕ ಟೀ ಸ್ಟಾಲ್‌ಗಳು ಇದಕ್ಕೆ ಸಾಕ್ಷಿಯಾಗಿದೆ. ಆದರೆ, ಟೀ, ಕಾಫಿಯನ್ನು ಮನಬಂದಂತೆ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿಜ ಹೇಳಬೇಕೆಂದರೆ, ಅನೇಕ ಜನರು ಈ ಅಭ್ಯಾಸಗಳಿಂದ ಸುಲಭವಾಗಿ ಹೊರಬರಲು ಸಾಧ್ಯವಾಗುವುದಿಲ್ಲ.
ಅನೇಕ ಜನರು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಊಟ ಮಾಡಿದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇದು ತುಂಬಾ ಹಾನಿಕಾರಕ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ. ಊಟವಾದ ತಕ್ಷಣ ಟೀ ಅಥವಾ ಕಾಫಿ ಕುಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ನಿರ್ದಿಷ್ಟವಾಗಿ, ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ. ಟೀ ಮತ್ತು ಕಾಫಿಯಲ್ಲಿರುವ ಪಾಲಿಫಿನಾಲ್ ಮತ್ತು ಟ್ಯಾನಿನ್ ಎಂಬ ಸಂಯುಕ್ತಗಳು ಇದಕ್ಕೆ ಕಾರಣ ಎನ್ನುತ್ತಾರೆ ಪೌಷ್ಟಿಕತಜ್ಞರು.
ತಿಂದ ತಕ್ಷಣ ಟೀ ಅಥವಾ ಕಾಫಿ ಕುಡಿದರೆ ನಾವು ಸೇವಿಸುವ ಆಹಾರದ ನೈಜ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೇವೆ.
ಇದು ಸಾಮಾನ್ಯ ಅಭ್ಯಾಸ ಎಂದು ನೀವು ಭಾವಿಸಿದರೆ, ಇದರಿಂದ ಉಂಟಾಗುವ ಹಾನಿಯ ಬಗ್ಗೆ ಯೋಚಿಸಬೇಕಾಗುತ್ತದೆ. ಇದು ದೇಹದಲ್ಲಿ ತೀವ್ರ ಕಬ್ಬಿಣದ ಅಂಶದ ಕೊರತೆಗೆ ಕಾರಣವಾಗಬಹುದು. ಕಬ್ಬಿಣದ ಕೊರತೆಯ ರಕ್ತಹೀನತೆ ಭಾರತದಲ್ಲಿ ಸಾಮಾನ್ಯವಾಗಿದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಅಂತಹ ಅಭ್ಯಾಸಗಳು ಮಹಿಳೆಯರಲ್ಲಿ ರಕ್ತಹೀನತೆಗೆ ಕಾರಣವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)