ನವದೆಹಲಿ: ಇಂದು ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಎನಿಸುವಂತ ಘಟನೆಯೊಂದು ನಡೆದಿದೆ. ಪಾಟೀದಾರ್ ಸಮುದಾಯದ ಪ್ರಬಲ ನಾಯಕ ಹಾರ್ದಿಕ್ ಪಾಟೀಲ್ ಕಾಂಗ್ರೆಸ್ ನಿಂದ ಹೊರಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಟ್ವಿಟ್ಟರ್ ನಲ್ಲಿ ನೇರವಾಗಿ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ.
ಪಕ್ಷ ಬಿಟ್ಟಿರುವ ವಿಚಾರ ಬರೆದಿರುವ ಹಾರ್ದಿಕ್, ಇಂದು ಕಾಂಗ್ರೆಸ್ ಪಕ್ಷದ ಹುದ್ದೆಗೆ ಮತ್ತು ಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಧೈರ್ಯದಿಂದ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರವನ್ನು ಎಲ್ಲಾ ಸಹೋದ್ಯೋಗಿಗಳು ಮತ್ತು ಗುಜರಾತ್ ಜನರು ಸ್ವಾಗತಿಸುತ್ತಾರೆ ಎಂಬ ನಂಬಿಕೆ ನನಗಿದೆ. ನನ್ನಲ್ಲಿರುವ ಅಚಲವಾದ ನಂಬಿಕೆ ಭವಿಷ್ಯದಲ್ಲಿ ನಾನು ಗುಜರಾತ್ ಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ದೇಶ ಮತ್ತು ಸಮಾಜದ ಹಿತದೃಷ್ಟಿಗೆ ವಿರುದ್ಧವಾಗಿದೆ. ಸಮಾಜದ ಒಳಿತಿನ ವಿರುದ್ಧವೆ ಕಾಂಗ್ರೆಸ್ ಕೆಲಸ ಮಾಡಿಕೊಂಡು ಬಂದಿದೆ. ನಾವೂ ನಂಬಿದ್ದ ಕಾಂಗ್ರೆಸ್ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದೆ. 2019ರಲ್ಲಿ ಕಾಂಗ್ರೆಸ್ ಸೇರಿದ ಬಳಿಕ ನಮ್ಮ ಕಾರ್ಯಕರ್ತರು ಸ್ವಂತ ಖರ್ಚಿನಿಂದ 500 ರಿಂದ 600 ಕಿಮೀ ಸಂಚರಿಸಿ ಜನರ ಬಳಿ ಹೋಗುತ್ತಿದ್ದರಯ. ಆದರೆ ಗುಜರಾತ್ ಕಾಂಗ್ರೆಸ್ ನಾಯಕರಿಗೆ ದೆಹಲಿಯಿಂದ ಬಂದಿದ್ದ ನಾಯಕನಿಗೆ ಚಿಕನ್ ಸ್ಯಾಂಡ್ ವೆಜ್ ಸಿಕ್ಕೀತಾ ಎಂಬ ಚಿಂತೆಯಾಗಿತ್ತು. ಹಲವು ದಶಕಗಳ ಹಿಂದೆಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿತ್ತು. ಶ್ರೀರಾಮ ಮಂದಿರ, ಕಾಶ್ಮೀರದ 370 ಅಂತಹ ಸಮಸ್ಯೆಗಳಿಗೆ ಜನ ದಶಕಗಳಿಂದ ಪರಿಹಾರ ಬಯಸುತ್ತಿದ್ದರು ಎಂದು ಪರೋಕ್ಷವಾಗಿ ಬಿಜೆಪಿ ಹೆಸರೇಳದೆ ಮಾತನಾಡಿದ್ದಾರೆ.