ವಿಶೇಷ ಲೇಖನ :
ಡಾ.ಕೆ.ವಿ.ಸಂತೋಷ್ ಹೊಳಲ್ಕೆರೆ.
ಚಿತ್ರದುರ್ಗ ಜಿಲ್ಲೆ, ಮೊ : 9342466936
ಹಲ್ಲನ್ನು ಕಾಪಾಡುವ ವಸಡು ಸದಾ ಕಾಲ ಆರೋಗ್ಯದಿಂದ ಇದ್ದಾಗ ಮಾತ್ರ ಹಲ್ಲಿನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ವಸಡಿನ ಅನಾರೋಗ್ಯವು ಮುಂದಿನ ದಿನಗಳಲ್ಲಿ ಹಲ್ಲಿನ ಅನಾರೋಗ್ಯವನ್ನು ತರುತ್ತದೆ. ಹಲ್ಲು ದೃಢವಾಗಿ ನಿಲ್ಲಬೇಕಾದರೆ ಹಾಗೂ ದೀರ್ಘಾವಧಿಯಲ್ಲಿ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳದೆ ಇರಲು ವಸಡಿನ ಗಟ್ಟಿತನ ಪ್ರಮುಖವಾಗಿ ಬೇಕಾಗುತ್ತದೆ. ವಸಡು ಕೆಲವೊಮ್ಮೆ ಹತ್ತಾರು ವಿವಿಧ ಕಾರಣಗಳಿಂದ ರೋಗಪೀಡಿತವಾದಾಗ ವ್ಯಕ್ತಿಯ ಗಮನಕ್ಕೆ ಬಾರದಿರಬಹುದು ಅಥವಾ ಬಂದರೂ ಅದನ್ನು ವ್ಯಕ್ತಿಯು ನಿರ್ಲಕ್ಷಿಸಬಹುದು.
ಆ ಕಾರಣಕ್ಕೆ ಪ್ರತಿಯೊಬ್ಬರೂ ವಸಡಿನ ರೋಗದ ಲಕ್ಷಣಗಳನ್ನು ತಿಳಿದುಕೊಂಡಿರಬೇಕು ಹಾಗೂ ಅವನ್ನು ಗಮನಿಸಿದ ತಕ್ಷಣ ತಮ್ಮ ವಸಡಿನ ಆರೋಗ್ಯದ ಕಡೆಗೆ ಗಮನಿಸಬೇಕು.
ವಸಡಿನ ಅನಾರೋಗ್ಯದ ಪ್ರಮುಖ ಲಕ್ಷಣಗಳು :
* ವಸಡಿನಲ್ಲಿ ರಕ್ತಸ್ರಾವ :
ಬ್ರಷ್ ಮಾಡುವಾಗ ಅಥವಾ ನೀರು ಹಾಕಿ ಮುಕ್ಕಳಿಸಿದಾಗ, ಉಗಿದಾಗ.. ವಸಡಿನಲ್ಲಿ ರಕ್ತಸ್ರಾವ ಆಗಬಹುದು, ಇದು ಪ್ರಮುಖವಾಗಿ ಬ್ಯಾಕ್ಟೀರಿಯಾ ಹಾಗೂ ಕೊಳಕು ಕಟ್ಟಿರುವುದರಿಂದ ವಸಡನ್ನು ಉರಿಯೂತಕ್ಕೆ ಗುರಿಯಾಗಿ ವಸಡಿನಲ್ಲಿ ರಕ್ತಸ್ರಾವ ಕಂಡುಬರುತ್ತದೆ.
* ವಸಡಿನ ಉರಿಯೂತ, ವಸಡಿನ ಬಾವು, ವಸಡು ಊದಿಕೊಳ್ಳುವುದು: ಸಾಮಾನ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ವಸಡು ಬಲಯುತವಾಗಿ, ಬಿಗಿಯಾಗಿ ಹಾಗೂ ಗುಲಾಬಿ ಬಣ್ಣದಿಂದ ಕೂಡಿರುತ್ತದೆ.ಆದರೆ ವಸಡಿನ ರೋಗ ಕಂಡು ಬಂದಾಗ ಕೆಂಪು ಬಣ್ಣಕ್ಕೆ ತಿರುಗಿಕೊಂಡಿರುತ್ತವೆ ಹಾಗೂ ಮುಟ್ಟಿದಾಗ ಬಹಳಷ್ಟು ನೋವು ಕಾಣಿಸುತ್ತದೆ. ದೇಹವು ಬ್ಯಾಕ್ಟೀರಿಯಾಕ್ಕೆ ಪ್ರತಿಬಂಧವಾಗಿ ವರ್ತಿಸುವ ಕಾರಣಕ್ಕೆ ಈ ರೀತಿ ಆಗುತ್ತದೆ.
* ಸಡಿಲಗೊಂಡ ಅಥವಾ ಜರುಗಿದ ಹಲ್ಲುಗಳು: ಹಲ್ಲುಗಳ ನಡುವೆ ಜಾಗ ಉಂಟಾಗುವುದು ಹಲ್ಲುಗಳ ನಡುವೆ ಆಹಾರ ಸಿಕ್ಕಿ ಬೀಳುವುದು, ಹಲ್ಲುಗಳು ಮುಂದಕ್ಕೆ ಹಿಂದಕ್ಕೆ ಚಾಚಿಕೊಳ್ಳುವುದು … ಇವೆಲ್ಲವೂ ಕೂಡ ವಸಡಿನ ರೋಗದ ಪ್ರಮುಖ ಲಕ್ಷಣವಾಗಿದೆ. ಸಮಸ್ಯೆ ತೀವ್ರಗೊಂಡಾಗ ಹಲ್ಲು ಸಂಪೂರ್ಣವಾಗಿ ಸಡಿಲಗೊಂಡು ಉದುರುತ್ತದೆ.
* ವಸಡಿನ ಸವೆತ:
ಹಲ್ಲನ್ನು ಹಿಡಿದಿರುವ ವಸಡು ಹಂತ ಹಂತವಾಗಿ ಕೆಳಗೆ ಜಾರಿ ಹಲ್ಲು ಉದ್ದವಾದಂತೆ ಗೋಚರಿಸುತ್ತದೆ ವಾಸ್ತವವಾಗಿ ಇಲ್ಲಿ ಮೂಳೆ ಸವಕಳಿಯಾಗಿ, ಹಲ್ಲು, ಜುಮ್ ಎನ್ನುವುದು ಬಿಸಿ, ತಣ್ಣಗಿನ ಆಹಾರಕ್ಕೆ ಸಂವೇದನೆ ಗೊಳ್ಳುವುದು ಆಗುತ್ತದೆ. ಹುಳುಕು ಹಿಡಿಯಲು ಇದು ಕಾರಣವಾಗಬಹುದು.
*ಹಲ್ಲಿನ ನಡುವೆ ಕೀವು ಬರುವುದು:
ಹಲ್ಲುಗಳ ನಡುವೆ ಆಹಾರ ಸಿಕ್ಕಿಕೊಳ್ಳುವುದು. ವಸಡು ಕೆಂಪಗಾಗಿ ಅಲ್ಲಿಂದ ಬಿಳಿ ಬಣ್ಣದ ಕೀವು ಸಣ್ಣದಾಗಿ ಜಿನುಗಲು ಪ್ರಾರಂಭವಾಗುವುದು.
* ತೀವ್ರವಾಗಿ ಕಾಡುವ ಬಾಯಿ ಒಣಗುವಿಕೆ ಹಾಗೂ ಬಾಯಿಯ ದುರ್ವಾಸನೆ:
ವ್ಯಕ್ತಿಯ ಬಾಯಿಯಲ್ಲಿ ಸದಾಕಾಲ ದುರ್ವಾಸನೆ ಬರುವುದು,ಬಾಯಲ್ಲಿ ತೇವಾಂಶ ಕಡಿಮೆಯಾದಂತಾಗಿ ಒಣಗುವುದು…ಕೂಡ ವಸಡು ರೋಗದ ಪ್ರಮುಖ ಲಕ್ಷಣವಾಗಿದೆ.
* ಆಹಾರ ಜಗೆಯುವಾಗ ನೋವು ಬರುವುದು: ಆಹಾರ ಸೇವಿಸುವಾಗ ಅಥವಾ ಊಟ ಮಾಡುವಾಗ ಸತತವಾಗಿ ಹಲ್ಲುಗಳಲ್ಲಿ ನೋವು ಬರುತ್ತದೆ,ವಸಡುಗಳಲ್ಲಿ ನೋವು ಕಾಡುತ್ತದೆ.ಗಟ್ಟಿ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ.
ಮೇಲಿನ ಎಲ್ಲಾ ಲಕ್ಷಣಗಳನ್ನು ತಪ್ಪದೇ ಗಮನಿಸುತ್ತಿರಬೇಕು. ನಿಮ್ಮಲ್ಲಿ ವಸಡು ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ದಂತ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಪಡೆಯಬೇಕು.
ಪರಿಹಾರ:
*ಸಾಧ್ಯವಾದಷ್ಟು ಪ್ರತಿದಿನ ಎರಡು ಬಾರಿ ಬ್ರಷ್ ಮಾಡಬೇಕು. ವಸಡಿನ ಆರೈಕೆ ಆರೋಗ್ಯದ ಕಡೆಗೆ ಗಮನ ಹರಿಸಬೇಕು.
ವಸಡಿನಲ್ಲಿ ರಕ್ತಸ್ರಾವ ಬರುತ್ತಿದ್ದರೆ ಎಂದಿಗೂ ನಿರ್ಲಕ್ಷಿಸದೆ ದಂತವೈದ್ಯರನ್ನು ಕಂಡು ಸಮಸ್ಯೆಗೆ ಚಿಕಿತ್ಸೆ ಪರಿಹಾರ ಪಡೆಯಬೇಕು.
*ಮೃದುವಾದ ಬ್ರಷ್ ಮಾತ್ರವೇ ಬಳಸಬೇಕು.ಗಟ್ಟಿ ಫ್ರೆಶ್ ಬಳಕೆ ಮಾಡಬಾರದು ಹಾಗೂ ಬ್ರಷ್ನ ಸರಿಯಾದ ವಿಧಾನ ವೈದ್ಯರಿಂದ ತಿಳಿದುಕೊಂಡು ಅದನ್ನು ಪಾಲಿಸಬೇಕು.
* ಹಲ್ಲು ವಸಡುಗಳ ಸಂಧಿಯಲ್ಲಿ ಕಡ್ಡಿ ಪಿನ್ನು ಎಂದಿಗೂ ಬಳಸಬಾರದು.
* ವಾರಕ್ಕೆ ಎರಡರಿಂದ ಮೂರು ಬಾರಿ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿಕೊಂಡು ಮಕ್ಕಳಿಸಬೇಕು.
* ವಸಡು ರೋಗಕ್ಕೆ ಕಾರಣ ತಿಳಿದುಕೊಂಡು ಅದರಂತೆ ಪರಿಹಾರ ಪಡೆಯಬೇಕು.
* ಪ್ರತಿದಿನ ಬ್ರಷ್ ಮಾಡಿದ ನಂತರ ತೋರು ಬೆರಳಿನಲ್ಲಿ ವಸಡನ್ನು ನಯವಾಗಿ ಮಸಾಜ್ ಮಾಡಬೇಕು. ಇದರಿಂದ ವಸಡಿನಲ್ಲಿ ಉತ್ತಮ ರಕ್ತ ಸಂಚಾರವಾಗಿ ಬಿಗಿತನ ಕಾಯ್ದುಕೊಳ್ಳುತ್ತದೆ.
ನೆನಪಿಡಿ: ವಸಡಿನ ಆರೋಗ್ಯವೇ ಹಲ್ಲಿನ ಆರೋಗ್ಯಕ್ಕೆ ಪೂರಕ ಎಂಬುದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು.


