ಚಿತ್ರದುರ್ಗ.ಜುಲೈ.21 : ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, 2026-27ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯದ 31 ವಸತಿ ಶಾಲೆಗಳನ್ನು ಪದವಿ ಪೂರ್ವ (ಪಿಯು) ವಸತಿ ಕಾಲೇಜುಗಳಾಗಿ ಉನ್ನತೀಕರಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಮಹತ್ವದ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿ.ವಿ. ಪುರದಲ್ಲಿರುವ ‘ಮೊರಾರ್ಜಿ ದೇಸಾಯಿ ವಸತಿ ಶಾಲೆ’ಯು (ಶಾಲಾ ಕೋಡ್: 25) ಪದವಿ ಪೂರ್ವ ಕಾಲೇಜಾಗಿ ಉನ್ನತೀಕರಣಗೊಂಡಿದ್ದು, ಜಿಲ್ಲೆಯ ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ನಂತರದ ಉನ್ನತ ಶಿಕ್ಷಣಕ್ಕೆ ಹಾದಿ ಸುಗಮವಾಗಿದೆ.

2026-27ರ ಬಜೆಟ್ ಕಂಡಿಕೆ-184ರ ಘೋಷಣೆಯಂತೆ, ಪರಿಶಿಷ್ಟ ಜಾತಿ-15, ಪರಿಶಿಷ್ಟ ಪಂಗಡ-6 ಹಾಗೂ ಹಿಂದುಳಿದ ವರ್ಗಗಳ 10 ಸೇರಿದಂತೆ ಒಟ್ಟು 31 ವಸತಿ ಶಾಲೆಗಳನ್ನು ‘ಪಿಸಿಎಂಬಿ’ (PCMB) ಮತ್ತು ‘ಪಿಸಿಎಂಸಿ’ (PCMC) ಸಂಯೋಜನೆಗಳ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.

ನೂತನವಾಗಿ ಉನ್ನತೀಕರಿಸಿದ ಕಾಲೇಜುಗಳಿಗೆ ಅಗತ್ಯವಿರುವ 217 ವಿವಿಧ ವೃಂದದ ಹುದ್ದೆಗಳನ್ನು ಸೃಷ್ಟಿಸಲಾಗಿದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ 217 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸಮ್ಮತಿ ಸೂಚಿಸಿದೆ. ಮೆರಿಟ್ ಆಧಾರದ ಮೇಲೆ (“Merit-cum-means”) ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದ್ದು, ನೇಮಕಾತಿ ನಿಯಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಸರ್ಕಾರದ ಈ ನಿರ್ಧಾರದಿಂದಾಗಿ ವಸತಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ನಂತರ ಶಾಲೆಯನ್ನು ತೊರೆಯುವ ಪ್ರಮಾಣ ಕಡಿಮೆಯಾಗಲಿದ್ದು, ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿಜ್ಞಾನ ಶಿಕ್ಷಣ ದೊರೆಯಲಿದೆ.













