Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72,186 ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಆದೇಶ

---Advertisement---

ಬೆಂಗಳೂರು.ಜೂನ್.25: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ಅಧಿಕೃತ ಆದೇಶವನ್ನು ಹೊರಡಿಸಿದೆ.

ಮುಖ್ಯವಾಗಿ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಅತ್ಯಂತ ಕಟ್ಟುನಿಟ್ಟಿನ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಮುಂದಿನ ಎರಡು ತಿಂಗಳ ಒಳಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಹಾಗೂ ಮುಂದಿನ ನಾಲ್ಕು ತಿಂಗಳೊಳಗೆ ಪರೀಕ್ಷೆಗಳನ್ನು ನಡೆಸಿ ಆರು ತಿಂಗಳೊಳಗೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

72,186 ಬೃಹತ್ ಹುದ್ದೆಗಳ ಭರ್ತಿ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದೆ. ಇದರಲ್ಲಿ 2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಈಗಾಗಲೇ ಸಹಮತಿ ನೀಡಿದೆ. ಇದರೊಂದಿಗೆ ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಶೇಕಡಾ 80 ರಷ್ಟು ಹುದ್ದೆಗಳಾದ ಒಟ್ಟು 32,177 ಹುದ್ದೆಗಳನ್ನು ಭರ್ತಿ ಮಾಡಲು ಸಹ ಆರ್ಥಿಕ ಇಲಾಖೆಯು ಪರಿಭಾವಿತ ಸಹಮತಿಯನ್ನು ನೀಡಿದೆ.

ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ವಿಳಂಬವಿಲ್ಲದೆ ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರವು ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳಿಗೆ ಉಸ್ತುವಾರಿ ಜವಾಬ್ದಾರಿಯನ್ನು ಹಂಚಿಕೆ ಮಾಡಿದೆ. ಮೊದಲನೇ ಅನುಬಂಧದಲ್ಲಿ ಹೆಸರಿಸಲಾದ ಕೃಷಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ರೇಷ್ಮೆ, ಸಣ್ಣ ನೀರಾವರಿ, ಮೀನುಗಾರಿಕೆ, ಸಹಕಾರ, ಸಮಾಜ ಕಲ್ಯಾಣ, ಜಲಸಂಪನ್ಮೂಲ, ಕಂದಾಯ (ವಿಪತ್ತು ನಿರ್ವಹಣೆ), ಕಾರ್ಮಿಕ, ಇಂಧನ ಮತ್ತು ಲೋಕೋಪಯೋಗಿ ಸೇರಿದಂತೆ ಒಟ್ಟು 17 ಇಲಾಖೆಗಳ ನೇರ ನೇಮಕಾತಿಯ ಉಸ್ತುವಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ವಹಿಸಲಾಗಿದೆ. ಅದೇ ರೀತಿ ಎರಡನೇ ಅನುಬಂಧದಲ್ಲಿ ಹೆಸರಿಸಲಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಅರಣ್ಯ, ಕಂದಾಯ, ಆರ್ಥಿಕ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಾಲಾ ಶಿಕ್ಷಣ, ಆರೋಗ್ಯ, ಉನ್ನತ ಶಿಕ್ಷಣ, ಕಾನೂನು, ವೈದ್ಯಕೀಯ ಶಿಕ್ಷಣ, ಪ್ರವಾಸೋದ್ಯಮ, ಸಾರಿಗೆ, ನಗರಾಭಿವೃದ್ಧಿ ಸೇರಿದಂತೆ ಒಟ್ಟು 34 ಇಲಾಖೆಗಳ ನೇರ ನೇಮಕಾತಿ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿ ಸಚಿವ ಸಂಪುಟವು ಆದೇಶಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಸಂದೀಪ್ ಬಿ.ಕೆ. ಅವರಿಂದ ಅಧಿಕೃತವಾಗಿ ಹೊರಬಿದ್ದಿರುವ ಈ ಆದೇಶದಲ್ಲಿ ನೇಮಕಾತಿ ಪ್ರಕ್ರಿಯೆಗೆ ಕಟ್ಟುನಿಟ್ಟಾದ ಗಡುವನ್ನು ವಿಧಿಸಲಾಗಿದೆ. ಮುಂದಿನ 2 ತಿಂಗಳ ಒಳಗಾಗಿ ಕಡ್ಡಾಯವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು, ಮುಂದಿನ 4 ತಿಂಗಳಲ್ಲಿ ಪರೀಕ್ಷೆ ನಡೆಸಬೇಕು ಮತ್ತು ಮುಂದಿನ 6 ತಿಂಗಳ ಒಳಗಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Join WhatsApp

Join Now

Join Telegram

Join Now