ಬೆಂಗಳೂರು.ಜುಲೈ.10: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ನೌಕರರನ್ನು ವರ್ಗಾವಣೆ ಮಾಡಿದ ಸಂದರ್ಭದಲ್ಲಿ ತಕ್ಷಣವೇ ಮುಂದಿನ ಹುದ್ದೆ ಅಥವಾ ಸ್ಥಳ ನಿಯುಕ್ತಿ (Next Posting) ನೀಡದೆ, ‘ಕಡ್ಡಾಯ ನಿರೀಕ್ಷೆ’ಯಲ್ಲಿ ಇರಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.
ಈ ಹಿಂದೆ ಮಾರ್ಚ್ 30, 2026 ರಂದು ಹೊರಡಿಸಲಾಗಿದ್ದ ಸುತ್ತೋಲೆಯನ್ನು ಹಿಂಪಡೆದು, ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಹೊಸ ಆದೇಶವನ್ನು ಹೊರಡಿಸಲಾಗಿದೆ. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 35777/2025 ರ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ ಅವರಿಗೆ ಮುಂದಿನ ಹುದ್ದೆಯನ್ನು ಸೂಚಿಸಿಯೇ ವರ್ಗಾವಣೆ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿ ಸ್ಥಳ ನಿಯುಕ್ತಿ ನೀಡದೆ ಕಡ್ಡಾಯ ನಿರೀಕ್ಷೆಯಲ್ಲಿರಿಸಿದರೆ, ಆ ಅವಧಿಗೆ ಪಾವತಿಸುವ ವೇತನ ಮತ್ತು ಭತ್ಯೆಯನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಗಳಿಂದಲೇ ವಸೂಲಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ವಿಶೇಷ ಸಂದರ್ಭಗಳಲ್ಲಿ, ಅಂದರೆ ಕಾನೂನು ಸಂಬಂಧಿತ ಸಮಸ್ಯೆಗಳು, ಅಮಾನತು, ಹಣದ ದುರ್ಬಳಕೆ, ಅಧಿಕಾರ ದುರ್ಬಳಕೆ ಅಥವಾ ತೀವ್ರ ಸ್ವರೂಪದ ಇಲಾಖಾ ವಿಚಾರಣೆ ಎದುರಿಸುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ, ಇತರ ಅನಿವಾರ್ಯ ಕಾರಣಗಳಿಂದ ವರ್ಗಾವಣೆಗೊಂಡ ನೌಕರರಿಗೆ ತಕ್ಷಣ ಸ್ಥಳ ನಿಯುಕ್ತಿ ನೀಡಲು ಸಾಧ್ಯವಾಗದಿದ್ದರೆ, ಸಕ್ಷಮ ಪ್ರಾಧಿಕಾರಗಳು ಗರಿಷ್ಠ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಡೆಯಲ್ಲಿರಿಸುವಂತಿಲ್ಲ.
ಒಂದು ವೇಳೆ ಆಡಳಿತಾತ್ಮಕ ಅನಿವಾರ್ಯತೆಯಿಂದಾಗಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷೆಯಲ್ಲಿ ಮುಂದುವರಿಸಬೇಕಾಗಿ ಬಂದಲ್ಲಿ, ಸಕ್ಷಮ ಪ್ರಾಧಿಕಾರಗಳು ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಅಷ್ಟೇ ಅಲ್ಲದೆ, ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆ ಪಡೆದು ಗರಿಷ್ಠ ಮೂರು ತಿಂಗಳವರೆಗೆ ಮಾತ್ರ ಕಡ್ಡಾಯ ನಿರೀಕ್ಷಡೆಯಲ್ಲಿರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವಾ ನಿಯಮಗಳು-3) ಸರ್ಕಾರದ ಅಧೀನ ಕಾರ್ಯದರ್ಶಿಯವರಾದ ಪ್ರತಿಭಾ ಕೆ. ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.










