Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುಮಕೂರು : 500 ರೂಪಾಯಿ ಮುಖಬೆಲೆಯ ನಕಲಿ ನೋಟು ಚಲಾವಣೆ : 6 ಆರೋಪಿಗಳು ಪೊಲೀಸರ ವಶಕ್ಕೆ!

---Advertisement---

ತುಮಕೂರು.ಜುಲೈ.10: ರಾಜ್ಯಾದ್ಯಂತ ಜಾಲ ವಿಸ್ತರಿಸಿದ್ದ ಬೃಹತ್ ಖೋಟಾನೋಟು ದಂಧೆಯೊಂದನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

ಕೇವಲ ಒಂದು 500 ರೂಪಾಯಿ ನಕಲಿ ನೋಟಿನ ಸುಳಿವನ್ನಿಟ್ಟುಕೊಂಡು ಕಾರ್ಯಾಚರಣೆ ನಡೆಸಿದ ಖಾಕಿ ಪಡೆ, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಹಲವೆಡೆ ನೆಟ್ ವರ್ಕ್ ಹೊಂದಿದ್ದ ಮುದ್ರಣ ಮತ್ತು ಮಾರಾಟ ಜಾಲದ ಆರು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.

ಕೆಲ ದಿನಗಳ ಹಿಂದೆ ಹುಳಿಯೂರಿನ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಖರೀದಿಸಿ, 500 ರೂಪಾಯಿಯ ನಕಲಿ ನೋಟು ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಸಂಶಯಗೊಂಡ ಅಂಗಡಿ ಮಾಲೀಕ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಬೆಂಗಳೂರು, ಮೈಸೂರು ಭಾಗಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಅತ್ಯಂತ ಯೋಜಿತವಾಗಿ ಕೆಲಸ ಹಂಚಿಕೊಂಡಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಂಗಳೂರಿನ ರುದ್ರೇಶ್ ಎಂಬಾತ ನಕಲಿ ನೋಟುಗಳನ್ನು ಮುದ್ರಿಸುವ ಕಾಯಕ ಮಾಡುತ್ತಿದ್ದರೆ, ಮೈಸೂರಿನ ರವಿ ಅದನ್ನು ಮಾರಾಟ ಮಾಡುವ ಹೊಣೆ ಹೊತ್ತಿದ್ದ. ಇನ್ನು ಅನಂತಪುರ ಮೂಲದ ಕುಬೇರಪ್ಪ ಹಾಗೂ ಹನುಮಂತಪ್ಪ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಇವರಿಂದ ನೋಟುಗಳನ್ನು ಪಡೆದುಕೊಳ್ಳುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಎಂಬುವವರು ಸಾರ್ವಜನಿಕ ವಲಯದಲ್ಲಿ ಇದನ್ನು ಅಸಲಿ ನೋಟುಗಳಂತೆ ಚಲಾವಣೆ ಮಾಡುತ್ತಿದ್ದರು.

ಬಂಧಿತರಿಂದ ಸದ್ಯಕ್ಕೆ 500 ರೂ. ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇವಲ ತುಮಕೂರು ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಈ ಖೋಟಾನೋಟುಗಳು ಚಲಾವಣೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

Join WhatsApp

Join Now

Join Telegram

Join Now