ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.22) : ಸರ್ಕಾರಿ ಆಸ್ಪತ್ರೆಗಳು ಕಾಗದ ರಹಿತವಾಗಿ ಕೆಲಸ ನಿರ್ವಹಿಸುವಂತೆ ಮಾಡುವಲ್ಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳಿಗೆ, ಔಷಧ ವಿತರಣಾಧಿಕಾರಿಗಳು ಮತ್ತು ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿಗಳ ಜವಬ್ದಾರಿ ಹೆಚ್ಚಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಂಗನಾಥ್ ಹೇಳಿದರು.
ನಗರದ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಬುಧವಾರ ಇ-ಆಸ್ಪತ್ರೆ ಕಾರ್ಯಕ್ರಮ ಅನುಷ್ಠಾದ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಗಾರ ಉದ್ಘಾಟಸಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳ ಪ್ರತಿಯೊಂದು ದಾಖಲೆಗಳನ್ನು ಕಾಗದರಹಿತವಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ. ಮುಂದಿನ ಹಂತವಾಗಿ ಜಿಲ್ಲೆಯ ಉಳಿದ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆರಂಭಿಸಲು ಉದ್ದೇಶಿಸಿಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಗಾರದಲ್ಲಿ ಇ- ಪ್ರೋಗ್ರಾಮರ್ ತಿಪ್ಪೇಸ್ವಾಮಿ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್, ಡಾ.ಮಧುಕುಮಾರ್ ಉಪಸ್ಥಿತರಿದ್ದರು.