ಬೆಂಗಳೂರು: ಈ ಬಾರಿಯ ರಾಜಕೀಯ ಕಣ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ಇಷ್ಟು ದಿನ ಜೆಡಿಎಸ್ ಪ್ರಾಬಲ್ಯ ಇರುವಡೆಗೆ ಸೀರಿಯಸ್ ಆಗಿ ಕಣ್ಣು ಹಾಯಿಸದ ಬಿಜೆಪಿ ಈ ಬಾರಿ ಆ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಓಡಾಟ ಜೋರಾಗಿ ನಡೆಯುತ್ತಾ ಇದೆ.
ಹೇಳಿ ಕೇಳಿ ಹಳೆ ಮೈಸೂರು ಭಾಗ ಜೆಡಿಎಸ್ ನ ಭದ್ರಕೋಟೆ ಇದ್ದಂತೆ. ಇಲ್ಲಿ ಜೆಡಿಎಸ್ ಗೆಲುವು ಖಚಿತವಾಗಿದೆ. ಆದರೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿಯಾಗಿ, ಪ್ರಚಾರ ಕಾರ್ಯ ಕೂಡ ನಡೆಸಿದ್ದಾರೆ. ಯಾರೊಂದಿಗೂ ಒಪ್ಪಂದಗಳು ಬೇಡ, ಸ್ವತಂತ್ರವಾಗಿ ಪಕ್ಷ ಸ್ಥಾಪನೆ ಮಾಡಬೇಕೆಂಬ ನುಡಿಯನ್ನು ನುಡಿದು ಹೋಗಿದ್ದಾರೆ.
ಅಮಿತ್ ಶಾ ಅವರ ಮಾತಿನಿಂದ ಸಮ್ಮಿಶ್ರ ಮಾಡಿಕೊಳ್ಳುವುದು ಡೌಟ್ ಎಂದೇ ಭಾವಿಸಲಾಗಿದೆ. ಬಳಿಕ ಬಿಜೆಪಿ ಎಚ್ಚರವಹಿಸಿದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಗೆಲ್ಲುವುದಕ್ಕೆ ಏನೆಲ್ಲಾ ಮಾಡಬೇಕು ಎಂಬ ಲೆಕ್ಕಚಾರ ಹಾಕುವುದಕ್ಕೆ ಶುರು ಮಾಡಿದೆ. ಅದರ ಭಾಗವಾಗಿಯೇ ಇಂದು ಮಂಡ್ಯ ಉಸ್ತುವಾರಿಯನ್ನು ಬದಲಾಯಿಸಿದ್ದಾರೆ.
ಈ ಹಿಂದೆ ಸಚಿವ ಗೋಪಾಲಯ್ಯ ಅವರನ್ನು ಮಂಡ್ಯ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಈ ಭಾಗದಲ್ಲಿ ಒಕ್ಕಲಿಗರ ಸಂಖ್ಯೆ ಅಧಿಕವಾಗಿರುವ ಕಾರಣ ಈಗ ಉಸ್ತುವಾರಿಯನ್ನು ಗೋಪಾಲಯ್ಯ ಕೈಯಿಂದ ತೆಗೆದುಕೊಂಡು ನೇರವಾಗಿ ಸಚಿವ ಆರ್ ಅಶೋಕ್ ಕೈಗೆ ಇಟ್ಟಿದ್ದಾರೆ.