ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿರುವ ಸಾವಿರಾರು ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ರಿಯಾಯಿತಿ ಘೋಷಿಸಿದೆ. 2,400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಿಸಲಾದ ಕೆಲವು ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಕಡ್ಡಾಯವಾಗಿದ್ದ ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate – OC) ಸಲ್ಲಿಕೆಯಿಂದ ಒಂದು ಬಾರಿ ವಿನಾಯಿತಿ ನೀಡಲಾಗಿದೆ.
2,400 ಚದರ ಅಡಿವರೆಗಿನ ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ನೆಲಮಹಡಿ ಹಾಗೂ ಮೂರು ಮಹಡಿಗಳ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ ಜೊತೆಗೆ ನಾಲ್ಕು ಮಹಡಿಗಳನ್ನು ಹೊಂದಿರುವ ಮನೆಗಳಿಗೆ ಈ ವಿನಾಯಿತಿ ಲಭ್ಯವಾಗಲಿದೆ. ಜೊತೆಗೆ, ಅನುಮೋದಿತ ಯೋಜನೆಯ ವಿಸ್ತೀರ್ಣಕ್ಕಿಂತ ಶೇಕಡಾ 20ರಷ್ಟು ಹೆಚ್ಚುವರಿ ವ್ಯತ್ಯಾಸವಿರುವ ಕಟ್ಟಡಗಳಿಗೂ ಈ ಸೌಲಭ್ಯ ಅನ್ವಯಿಸುತ್ತದೆ.
ಈ ವಿಶೇಷ ಸಡಿಲಿಕೆಯ ಪ್ರಯೋಜನ ಪಡೆಯಲು ಕಟ್ಟಡ ಮಾಲೀಕರು 2026ರ ಮೇ 31ರೊಳಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರಬೇಕು. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ OC ಇಲ್ಲದೇ ವಿದ್ಯುತ್ ಸಂಪರ್ಕ ಪಡೆಯುವ ಅವಕಾಶ ದೊರೆಯಲಿದೆ.

ವಿದ್ಯುತ್ ಸಂಪರ್ಕ ನೀಡುವ ಮೊದಲು ಕಟ್ಟಡ ಪೂರ್ಣಗೊಂಡಿದೆಯೇ ಹಾಗೂ ಸಂಪರ್ಕಕ್ಕೆ ಅರ್ಹವಾಗಿದೆಯೇ ಎಂಬುದನ್ನು ಸಂಬಂಧಿತ ವಿದ್ಯುತ್ ಸರಬರಾಜು ಸಂಸ್ಥೆಗಳು ಪರಿಶೀಲಿಸಬೇಕು. ಪರಿಶೀಲನೆ ವೇಳೆ ಕಟ್ಟಡದ ಛಾಯಾಚಿತ್ರಗಳನ್ನು ಸಂಗ್ರಹಿಸಿ ದಾಖಲೆ ರೂಪದಲ್ಲಿ ಉಳಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಎನ್.ಕೆ. ಲಕ್ಷ್ಮಿಸಾಗರ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.








