Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಆಂತರಿಕ ಕಿತ್ತಾಟ ಮತ್ತೆ ಮುನ್ನೆಲೆಗೆ: ವೈದ್ಯರ ನಡುವಿನ ಸಮನ್ವಯ ಕೊರತೆಗೆ ಶಾಸಕ ವೀರೇಂದ್ರ ಪಪ್ಪಿ ಕ್ಲಾಸ್

---Advertisement---

ಸುದ್ದಿಒನ್, ಚಿತ್ರದುರ್ಗ ಅ.26: ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡಲಾಗುತ್ತಿಲ್ಲ, ಬಡ ರೋಗಿಗಳಿಂದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ, ಆಸ್ಪತ್ರೆಯ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ವೈದ್ಯಕೀಯ ಸೇವೆಗಳಲ್ಲಿ ವಿಪರೀತ ಲೋಪಗಳಾಗಿವೆ ಎಂದು ಸಾಕಷ್ಟು ಸಮಸ್ಯೆಗಳು ಕೇಳಿ ಬಂದಿದ್ದವು ಈ ವಿಚಾರವನ್ನು ಗಮನಿಸಿದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸೋಮವಾರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ವಿವಿಧ ವಾರ್ಡ್ಗಳಲ್ಲಿ ರೋಗಿಗಳೊಂದಿಗೆ ನೇರವಾಗಿ ಸಮಾಲೋಚನೆ ನಡೆಸಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಡೀನ್ ಮತ್ತು ಆರ್‌ಎಂಒ ನಡುವಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ :
ಜಿಲ್ಲಾಸ್ಪತ್ರೆಯ ವೈದ್ಯಕೀಯ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದ ವಿಚಾರವೂ ಶಾಸಕರ ಭೇಟಿಯ ಸಂದರ್ಭದಲ್ಲಿ ಚರ್ಚೆಗೆ ಬಂದಿತು. ನಿವಾಸಿ ವೈದ್ಯಾಧಿಕಾರಿ (ಆರ್‌ಎಂಒ) ಡಾ. ಪಾರ್ವತಿ ಅವರು ಆಸ್ಪತ್ರೆಯ ಆಡಳಿತಾತ್ಮಕ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಡೀನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರೊಂದಿಗಿನ ಸಮನ್ವಯದ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.

ಕಳೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಆಸ್ಪತ್ರೆಯ ವೈದ್ಯಕೀಯ ಆಡಳಿತ ಮತ್ತು ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾಗಿ ಡಾ. ಪಾರ್ವತಿ ತಿಳಿಸಿದ್ದಾರೆ. ಆರ್‌ಎಂಒ ಹುದ್ದೆಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಡೀನ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಅಗತ್ಯ ಸಹಕಾರ ದೊರೆಯುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.

ಬಡ ರೋಗಿಗಳಿಗೆ ಉಚಿತವಾಗಿ ಮತ್ತು ಪ್ರಾಮಾಣಿಕವಾಗಿ ಆರೋಗ್ಯ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅಧಿಕಾರಿಗಳ ವರ್ತನೆ ಹಾಗೂ ಆಡಳಿತಾತ್ಮಕ ಅಡೆತಡೆಗಳಿಂದ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಡಾ. ಪಾರ್ವತಿ ಅವರು ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ನಡುವೆ ಸಮನ್ವಯ ಇರಬೇಕು. ಆಂತರಿಕ ಭಿನ್ನಾಭಿಪ್ರಾಯಗಳು ರೋಗಿಗಳ ಚಿಕಿತ್ಸೆಯ ಮೇಲೆ ಪರಿಣಾಮ ಬೀರಬಾರದು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಿಗೆ ನಂಬಿಕೆಯಿಂದ ಬರುತ್ತಾರೆ. ಅವರ ನಂಬಿಕೆಗೆ ಧಕ್ಕೆಯಾಗದಂತೆ ವೈದ್ಯರು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಮೆಡಿಕಲ್ ಕಾಲೇಜು ವ್ಯವಸ್ಥಾಪಕ ಯುವರಾಜ್, ಜಿಲ್ಲಾಸ್ಪತ್ರೆ ಡಿ ಎಸ್ ರವೀಂದ್ರ, ಡಾ.ಪಾರ್ವತಿ, ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ ಹಾಗೂ ಇತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now