ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2026-27ನೇ ಸಾಲಿನ ಖಾರಿಫ್ ಹಂಗಾಮಿನ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಬಾರಿ ಎಲ್ಲಾ ಬೆಳೆಗಳ ಪೈಕಿ ಸೂರ್ಯಕಾಂತಿ ಬೀಜಕ್ಕೆ ಅತಿ ಹೆಚ್ಚು ಏರಿಕೆ ನೀಡಲಾಗಿದ್ದು, ಪ್ರತಿ ಕ್ವಿಂಟಲ್‌ಗೆ 622 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹತ್ತಿಗೆ 557 ರೂಪಾಯಿ, ನೈಜರ್ ಬೀಜಕ್ಕೆ 515 ರೂಪಾಯಿ ಹಾಗೂ ಎಳ್ಳಿಗೆ 500 ರೂಪಾಯಿ ಹೆಚ್ಚಳ ಘೋಷಿಸಲಾಗಿದೆ.ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನೂ ಏರಿಸಲಾಗಿದ್ದು, ಸಾಮಾನ್ಯ ವರ್ಗದ ಭತ್ತದ MSP ಅನ್ನು ಪ್ರತಿ ಕ್ವಿಂಟಲ್‌ಗೆ 72 ರೂಪಾಯಿ ಹೆಚ್ಚಿಸಿ 2,441 ರೂಪಾಯಿಗೆ ನಿಗದಿಪಡಿಸಲಾಗಿದೆ. ‘ಗ್ರೇಡ್-ಎ’ ಭತ್ತದ ಬೆಲೆ ಕೂಡ 2,461 ರೂಪಾಯಿಗೆ ಏರಿಕೆಯಾಗಿದೆ.

ರೈತರಿಗೆ ಕೃಷಿ ವೆಚ್ಚಕ್ಕಿಂತ ಕನಿಷ್ಠ 1.5 ಪಟ್ಟು ಹೆಚ್ಚು ಬೆಲೆ ಖಚಿತಪಡಿಸುವ ನೀತಿಯನ್ನು ಸರ್ಕಾರ ಮುಂದುವರಿಸಿದೆ. ಬೇಳೆಕಾಳು, ಎಣ್ಣೆಕಾಳು ಹಾಗೂ ಸಿರಿಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡುವುದು ಈ ನಿರ್ಧಾರದ ಮುಖ್ಯ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಅಂದಾಜು ಉತ್ಪಾದನಾ ವೆಚ್ಚದ ಮೇಲೆ ಹೆಚ್ಚು ಲಾಭ ದೊರೆಯುವ ಬೆಳೆಗಳಲ್ಲಿ ಹೆಸರುಕಾಳು ಮೊದಲ ಸ್ಥಾನದಲ್ಲಿದ್ದು, ಸುಮಾರು 61 ಶೇಕಡಾ ಲಾಭ ಸಿಗಲಿದೆ ಎಂದು ಹೇಳಲಾಗಿದೆ. ಬಾಜ್ರಾ ಮತ್ತು ಮೆಕ್ಕೆಜೋಳಕ್ಕೆ ತಲಾ 56 ಶೇಕಡಾ ಹಾಗೂ ತೊಗರಿಗೆ 54 ಶೇಕಡಾ ಲಾಭದ ಪ್ರಮಾಣ ನಿಗದಿಪಡಿಸಲಾಗಿದೆ.
ಕಳೆದ ದಶಕದೊಂದಿಗೆ ಹೋಲಿಸಿದರೆ ಸರ್ಕಾರದ ಖರೀದಿ ಮತ್ತು ರೈತರಿಗೆ ನೀಡಿದ ಪಾವತಿಗಳಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. 2004-05ರಿಂದ 2013-14ರವರೆಗೆ ಭತ್ತದ ರೈತರಿಗೆ 4.44 ಲಕ್ಷ ಕೋಟಿ ರೂಪಾಯಿ ಪಾವತಿಯಾಗಿದ್ದರೆ, 2014-15ರಿಂದ 2025-26ರವರೆಗೆ ಈ ಮೊತ್ತ 16.08 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.ಒಟ್ಟು 14 ಖಾರಿಫ್ ಬೆಳೆಗಳಿಗೆ ರೈತರಿಗೆ ನೀಡಲಾದ MSP ಪಾವತಿ ಮೊತ್ತವೂ 4.75 ಲಕ್ಷ ಕೋಟಿ ರೂಪಾಯಿಯಿಂದ 18.99 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಈ ನಿರ್ಧಾರದಿಂದ ದೇಶದ ಕೋಟ್ಯಂತರ ರೈತರಿಗೆ ನೇರ ಲಾಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.


















