ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾದ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ನಾಲ್ಕು ಪ್ರಮುಖ ನಿಗಮಗಳ ಮೂಲಕ ಹೊಲಿಗೆ ಯಂತ್ರ ಯೋಜನೆಯಡಿ ಒಟ್ಟು 16.04 ಕೋಟಿ ರೂ. ವೆಚ್ಚದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಖರೀದಿಸಿ ವಿತರಿಸಲು ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 9,243 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸುವ ಗುರಿ ಹೊಂದಲಾಗಿದ್ದು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತಗಳ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುವುದು. (ಕಳೆದ ಸಾಲಿನಲ್ಲಿ 7,724 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಗಿತ್ತು).
ಸಂಗೊಳ್ಳಿ ಸೈನಿಕ ಶಾಲೆ ನಿರ್ಮಾಣಕ್ಕೆ ₹228.95 ಕೋಟಿ ಪರಿಷ್ಕೃತ ಅಂದಾಜು
ಸಂಗೊಳ್ಳಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ನಿರ್ಮಾಣ ಕಾಮಗಾರಿಯ 228.95 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಶಾಲಾ ನಿರ್ಮಾಣದಲ್ಲಿ ಕೈಗೊಂಡ ಹೆಚ್ಚುವರಿ ಕೆಲಸಗಳು, ಬೆಲೆ ಏರಿಕೆ ಹಾಗೂ ಜಿ.ಎಸ್.ಟಿ. ಪಾವತಿ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ವೆಚ್ಚ ಭರಿಸಲಾಗುತ್ತಿದ್ದು, 2022ರಿಂದ ಕಾರ್ಯಾರಂಭ ಮಾಡಿರುವ ಈ ಶಾಲೆಯಲ್ಲಿ ಪ್ರಸ್ತುತ 6ರಿಂದ 10ನೇ ತರಗತಿವರೆಗೆ 540 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಗಣಿಗಾರಿಕೆ ಅಕ್ರಮ ತನಿಖಾ ತಂಡದ ಅವಧಿ ವಿಸ್ತರಣೆ
ಗಣಿಗಾರಿಕೆಯಲ್ಲಿ ನಡೆದ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಸೃಜಿಸಲಾಗಿರುವ ವಿಶೇಷ ತನಿಖಾ ತಂಡದ (SIT) ಕಾರ್ಯಾವಧಿಯನ್ನು ಅಗತ್ಯ ಸಿಬ್ಬಂದಿ ಮತ್ತು ಮೂಲಭೂತ ಸೌಲಭ್ಯಗಳೊಂದಿಗೆ 2026ರ ಜುಲೈ 1ರಿಂದ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ವಿಸ್ತರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.
ಸರ್ಕಾರಿ ಆಸ್ಪತ್ರೆಗಳ ಲ್ಯಾಬ್ ಉಪಕರಣಗಳ ಖರೀದಿಗೆ ₹21.11 ಕೋಟಿ
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಉಚಿತ ಔಷಧ ಮತ್ತು ರೋಗನಿರ್ಣಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು 21.11 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ಉಪಕರಣಗಳು, ಅಗತ್ಯ Reagents ಹಾಗೂ Consumablesಗಳನ್ನು ಕರ್ನಾಟಕ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ ಲಿಮಿಟೆಡ್ (KMSCL) ಮೂಲಕ ಖರೀದಿಸಲು ಒಪ್ಪಿಗೆ ಸೂಚಿಸಲಾಗಿದೆ.
ಹುಬ್ಬಳ್ಳಿ ಸಮಗ್ರ ಕ್ರೀಡಾಂಗಣ ಪಿಪಿಪಿ ಮಾದರಿಯಲ್ಲಿ 20 ವರ್ಷ ನಿರ್ವಹಣೆ
ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯ ಲೋಹಿಯಾ ನಗರದ 14.6 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿರುವ ಸಮಗ್ರ ಕ್ರೀಡಾಂಗಣ ಸಂಕೀರ್ಣದ ವೃತ್ತಿಪರ ನಿರ್ವಹಣೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ 20 ವರ್ಷಗಳ ಅವಧಿಗೆ ಖಾಸಗಿಯವರ ಸೇವೆ ಪಡೆಯಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಬೆಂಗಳೂರು ನಗರದಲ್ಲಿ ಜಲಸಂಗ್ರಹಾಗಾರ ಹಾಗೂ ಒಳಚರಂಡಿ ಯೋಜನೆಗಳು
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪುಲಕೇಶಿ ನಗರ ಹಾಗೂ ಬನಶಂಕರಿ ಸೇವಾರಾಣೆಯಲ್ಲಿ ಒಟ್ಟು 61.5 ಕೋಟಿ ರೂ. ವೆಚ್ಚದಲ್ಲಿ ಎರಡು ಜಲಸಂಗ್ರಹಾಗಾರಗಳ ನಿರ್ಮಾಣದ ಡಿಪಿಆರ್ಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ ಸರ್ವಜ್ಞ ನಗರ ಕ್ಷೇತ್ರದ ಕಾಚರಕನಹಳ್ಳಿಯಲ್ಲಿ 51.37 ಕೋಟಿ ರೂ. ಅಂದಾಜು ವೆಚ್ಚದಲ್ಲಿ 10 ಎಂ.ಎಲ್.ಡಿ. ಸಾಮರ್ಥ್ಯದ ಹೆಚ್ಚುವರಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (STP) ನಿರ್ಮಿಸಲು ಒಪ್ಪಿಗೆ ಸಿಕ್ಕಿದೆ.
ಗ್ರೇಟರ್ ಬೆಂಗಳೂರು ಮಹಾಯೋಜನೆ ಮತ್ತು ತ್ಯಾಜ್ಯ ನಿರ್ವಹಣೆ
ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ 16.60 ಕೋಟಿ ರೂ. ವೆಚ್ಚದಲ್ಲಿ ಜಿಐಎಸ್ ಆಧಾರಿತ ಸಮಗ್ರ ಮಹಾಯೋಜನೆ (ಮಾಸ್ಟರ್ ಪ್ಲಾನ್) ಸಿದ್ಧಪಡಿಸಲು ಸಂಪುಟ ಸಮ್ಮತಿಸಿದೆ. ಇದರ ಜೊತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಮುಂದಿನ ಏಳು ವರ್ಷಗಳ ಕಾಲ ಸಮಗ್ರ ತ್ಯಾಜ್ಯ ನಿರ್ವಹಣೆ ಸೇವೆ ಕೈಗೊಳ್ಳಲು 1494.70 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ₹33.36 ಕೋಟಿ
ಅರಣ್ಯ ಮತ್ತು ಅಂಚಿನಲ್ಲಿ ವಾಸಿಸುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ಧಿ ಮುಂತಾದ ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ (PVTG) ಸಮುದಾಯಗಳ ಸಮಗ್ರ ಆರ್ಥಿಕ, ಕೌಶಲ್ಯ ಹಾಗೂ ಜೀವನೋಪಾಯ ಬೆಂಬಲಕ್ಕಾಗಿ 33.36 ಕೋಟಿ ರೂ. ಅನುದಾನದೊಂದಿಗೆ ನೂತನ ‘ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರಿ ಯೋಜನೆಗಳ ಸಮೀಕ್ಷೆಗೆ ‘ಪ್ರಾಜೆಕ್ಟ್ ಕೆ-ಮಾನಿಟರ್’ ಹಾಗೂ ಲೋಕಾಯುಕ್ತ ನಿಯಮ ಪರಿಷ್ಕರಣೆ
ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಸೇರಿದಂತೆ ಇತರೆ ಅಭಿವೃದ್ಧಿ ಯೋಜನೆಗಳ ವಾಸ್ತವ ಅನುಷ್ಠಾನ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಮೌಲ್ಯಮಾಪನ ಮಾಡಲು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ವತಿಯಿಂದ 14 ಕೋಟಿ ರೂ. ವೆಚ್ಚದಲ್ಲಿ ‘Project K-Monitor’ ಸಮೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಇದರೊಂದಿಗೆ 40 ವರ್ಷಗಳಷ್ಟು ಹಳೆಯದಾದ ಕರ್ನಾಟಕ ಲೋಕಾಯುಕ್ತದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಿ ‘ನಿಯಮಗಳು 2026’ಕ್ಕೆ ಸಂಪುಟ ಅನುಮೋದನೆ ಮುದ್ರೆ ಒತ್ತಿದೆ.
















