Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇಂದ್ರ ಸರ್ಕಾರದಿಂದ ಜನಸಾಮಾನ್ಯರಿಗೆ ಸಿಹಿಸುದ್ದಿ ; ಬಿಪಿ, ಮಧುಮೇಹ ಸೇರಿ 39 ಅಗತ್ಯ ಔಷಧಿಗಳ ಬೆಲೆ ಇಳಿಕೆ!

---Advertisement---

ದೆಹಲಿ.ಜುಲೈ.11: ಆರೋಗ್ಯದ ಮೇಲಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ 39 ಹೊಸ ಔಷಧ ಸಂಯೋಜನೆಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ನಿಗದಿಪಡಿಸಿ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ (NPPA) ಅಧಿಕೃತ ಆದೇಶ ಹೊರಡಿಸಿದೆ.

ಡ್ರಗ್ಸ್ ಆದೇಶ 2013ರ ಅನ್ವಯ ಜುಲೈ 8, 2026ರಂದು ಈ ಹೊಸ ಅಧಿಸೂಚನೆ ಹೊರಬಿದ್ದಿದ್ದು, ಜೀವ ರಕ್ಷಕ ಔಷಧಿಗಳು ಇನ್ನು ಮುಂದೆ ಜನಸಾಮಾನ್ಯರಿಗೆ ನಿಗದಿತ ದರದಲ್ಲಿ ಲಭ್ಯವಾಗಲಿವೆ.

ಈ ಪಟ್ಟಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು (ಸ್ಟ್ರೋಕ್) ನಂತಹ ತುರ್ತು ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಬಳಸುವ ‘Tenecteplase (TNK-TPA) 50 mg’ ಇಂಜೆಕ್ಷನ್ ಅತ್ಯಂತ ದುಬಾರಿ ಔಷಧಿಯಾಗಿದೆ. ಜೈವಿಕ ತಂತ್ರಜ್ಞಾನ ಆಧಾರಿತ ಈ ಇಂಜೆಕ್ಷನ್ನ ಒಂದು ವೈಯಲ್ ಬೆಲೆಯನ್ನು ₹60,238.27 ಎಂದು ನಿಗದಿಪಡಿಸಲಾಗಿದೆ. ಇದಾದ ನಂತರ ಕಣ್ಣಿನ ಗ್ಲೂಕೋಮಾ ಚಿಕಿತ್ಸೆಗೆ ಬಳಸುವ ‘Netarsudil + Latanoprost’ ಡ್ರಾಪ್ಸ್ (ಪ್ರತಿ ಮಿಲಿಗೆ ₹362.57) ಎರಡನೇ ದುಬಾರಿ ಔಷಧಿಯಾಗಿದೆ.

ಮತ್ತೊಂದೆಡೆ, ಕೇವಲ ₹2.80 ದರ ಹೊಂದಿರುವ ‘Clobazam Oral Suspension’ ಹಾಗೂ ₹3.67 ಬೆಲೆಯ ‘Aspirin + Atorvastatin’ ಕ್ಯಾಪ್ಸುಲ್ಗಳು ಈ ಪಟ್ಟಿಯಲ್ಲಿರುವ ಅತ್ಯಂತ ಅಗ್ಗದ ಔಷಧಿಗಳಾಗಿವೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಹೊಸ ನಿಯಮಗಳ ಪ್ರಕಾರ, ಔಷಧ ತಯಾರಕ ಕಂಪನಿಗಳು ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. ಅಧಿಸೂಚನೆಯಲ್ಲಿನ ಬೆಲೆಗಳು ಜಿಎಸ್ಟಿ ಹೊರತುಪಡಿಸಿದ ದರಗಳಾಗಿದ್ದು, ಕಂಪನಿಗಳು ತಮ್ಮ ಪರಿಷ್ಕೃತ ಬೆಲೆಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಬೇಕು. ಒಂದು ವೇಳೆ ಯಾವುದೇ ಕಂಪನಿ ನಿಯಮ ಉಲ್ಲಂಘಿಸಿ ಹೆಚ್ಚಿನ ದರ ವಸೂಲಿ ಮಾಡಿದರೆ, ಹೆಚ್ಚುವರಿ ಹಣವನ್ನು ಬಡ್ಡಿ ಸಮೇತ ಸರ್ಕಾರಕ್ಕೆ ಮರುಪಾವತಿಸಬೇಕಾಗುತ್ತದೆ. ಜೊತೆಗೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಗ್ರಾಹಕರ ಮಾಹಿತಿಗಾಗಿ ಔಷಧ ಅಂಗಡಿಗಳು ಈ ನವೀಕೃತ ಬೆಲೆಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಮಧುಮೇಹ ಮತ್ತು ಹೃದಯ ರೋಗಿಗಳಿಗೆ ದೊಡ್ಡ ರಿಲೀಫ್
ದೈನಂದಿನ ಚಿಕಿತ್ಸೆಗೆ ಅಗತ್ಯವಿರುವ ಪ್ರಮುಖ ಮಾತ್ರೆಗಳ ಬೆಲೆಯನ್ನು ₹8 ರಿಂದ ₹21ರ ಆಸುಪಾಸಿನಲ್ಲಿ ನಿಯಂತ್ರಿಸಲಾಗಿದೆ. ಗ್ಲಿಮೆಪಿರೈಡ್, ಮೆಟ್ಫಾರ್ಮಿನ್, ಟೆಲ್ಮಿಸಾರ್ಟನ್ ಹಾಗೂ ಅಮ್ಲೋಡಿಪಿನ್ ಒಳಗೊಂಡ ಸಂಯೋಜನೆಗಳು ಈ ಪಟ್ಟಿಯಲ್ಲಿದ್ದು, ಬಿಪಿ ಮತ್ತು ಶುಗರ್ ಎರಡೂ ಇರುವ ರೋಗಿಗಳಿಗೆ ಇದು ವರದಾನವಾಗಲಿದೆ. ಸಿಪ್ಲಾ, ಸನ್ ಫಾರ್ಮಾ, ಮ್ಯಾನ್ಕೈಂಡ್ ಹಾಗೂ ಅಲ್ಕೆಮ್ನಂತಹ ಪ್ರಮುಖ ಕಂಪನಿಗಳ ಉತ್ಪನ್ನಗಳು ಈ ಬೆಲೆ ನಿಯಂತ್ರಣದ ವ್ಯಾಪ್ತಿಗೆ ಒಳಪಟ್ಟಿವೆ.

Join WhatsApp

Join Now

Join Telegram

Join Now