ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜು. 25 : ಚಿತ್ರದುರ್ಗ ಜಿಲ್ಲೆಯು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತನಾಗಿ ಇಡೀ ದೇಶ ಹಾಗೂ ವಿದೇಶಗಳಲ್ಲೂ ಹೆಸರು ತರಬೇಕು ಎಂಬ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಂಸದರಾದ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಕೆಂದ್ರೀಯ ವಿಶ್ವವಿದ್ಯಾಲಯಕ್ಕೆ ಶನಿವಾರ ಬೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಕೆಂದ್ರೀಯ ವಿದ್ಯಾವಿದ್ಯಾಲಯ ಇಲ್ಲದಿರುವುದನ್ನು ಗಮನಿಸಿ, ಲೋಕಸಭೆಯ ಮೊದಲ ದಿನದ ಅಧಿವೇಶನದಲ್ಲೇ ಮಂಜೂರಾತಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ವಿನಂತಿ ಸಲ್ಲಿಸಲಾಗಿತ್ತು. ಪರಿಣಾಮವಾಗಿ ಭಾರತ ಸರ್ಕಾರವು ಚಿತ್ರದುರ್ಗಕ್ಕೆ ಕೆಂದ್ರೀಯ ವಿದ್ಯಾವಿದ್ಯಾಲಯವನ್ನು ಮಂಜೂರು ಮಾಡಿದೆ.ನೂತನ ಕೆಂದ್ರೀಯ ವಿದ್ಯಾವಿದ್ಯಾಲಯಕ್ಕಾಗಿ ಈಗಾಗಲೇ 10 ಎಕರೆ ಜಮೀನನ್ನು ನೀಡುವುದು ಸೇರಿದಂತೆ ವಿವರವಾದ ಯೋಜನಾ ವರದಿ (ಆPಖ) ಸಿದ್ಧಗೊಂಡಿದೆ. ಶೀಘ್ರದಲ್ಲೇ ಮಂಜೂರಾತಿ ಆದೇಶ ಸಿಗಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಕ್ಯಾಂಪಸ್‍ಗೆ ಸ್ಥಳಾಂತರಗೊಳ್ಳಲಾಗುವುದು. ಈ ನೂತನ ಕ್ಯಾಂಪಸ್‍ನಲ್ಲಿ ಸುಮಾರು 800 ಮಕ್ಕಳಿಗೆ ವ್ಯಾಸಂಗ ಮಾಡಲು ಅವಕಾಶ ಸಿಗಲಿದೆ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾವಂತನಾಗಿ ಇಡೀ ದೇಶ ಹಾಗೂ ವಿದೇಶಗಳಲ್ಲೂ ಹೆಸರು ತರಬೇಕು ಎಂಬ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ವಿನಯ, ನಮ್ರತೆ ಹಾಗೂ ಶಿಸ್ತಿನಿಂದ ಅಧ್ಯಯನ ನಡೆಸಿ ಹೆತ್ತವರಿಗೆ ಹಾಗೂ ಶಿಕ್ಷಕರಿಗೆ ಗೌರವ ತರಬೇಕು. ಈ ಶಾಲೆಯು ಇಡೀ ರಾಜ್ಯಕ್ಕೆ ಮಾದರಿ ಶಾಲೆಯಾಗಬೇಕು ಎಂಬ ಅಪೇಕ್ಷೆಯನ್ನು ಸಂಸದರು ವ್ಯಕ್ತಪಡಿಸಿ ಚಿತ್ರದುರ್ಗ ಜಿಲ್ಲೆಗೆ ಕೆಂದ್ರೀಯ ವಿದ್ಯಾವಿದ್ಯಾಲಯವನ್ನು ಮಂಜೂರು ಮಾಡಿದ ಭಾರತ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಇದಕ್ಕೆ ಸಹಕರಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗರಾಜ್ ಬೇದ್ರೇ, ಸತೀಶ್, ಪ್ರೇಮನಾಥ್, ಮೂರಾರ್ಜಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.









