ಬೆಂಗಳೂರು.ಜೂನ್.29: ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಸರ್ಕಾರ ಮತ್ತೊಂದು ಮಹತ್ವದ ಉಡುಗೊರೆ ನೀಡಿದೆ. ಉಚಿತ ಬಸ್ ಪಾಸ್ ಘೋಷಣೆಯ ಬೆನ್ನಲ್ಲೇ, ಈ ಹಿಂದೆ ಪಾಸ್ ಪಡೆಯುವಾಗ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನು ಸಂಪೂರ್ಣವಾಗಿ ಕೈಸೇರಿಸಲು ಸಾರಿಗೆ ಇಲಾಖೆ ಹಸಿರು ನಿಶಾನೆ ತೋರಿದೆ. ಈ ಹಿನ್ನೆಲೆಯಲ್ಲಿ ಜೂನ್ 29 ರಿಂದಲೇ (ಇಂದಿನಿಂದ) ಅಧಿಕೃತವಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ.
ಈ ಹಿಂದೆ ಉಚಿತ ಪಾಸ್ ವಿತರಣೆಯ ನಿಯಮಾವಳಿಗಳ ಅನ್ವಯ ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕವನ್ನು ಪಡೆದುಕೊಂಡಿದ್ದವು. ಇದೀಗ ಆ ಎಲ್ಲಾ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ನಾಲ್ಕೂ ಸಾರಿಗೆ ನಿಗಮಗಳಿಗೆ ಸರ್ಕಾರ ಕಡಕ್ ಆದೇಶ ಜಾರಿ ಮಾಡಿದೆ.
ಅರ್ಹ ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ ‘ಸೇವಾಸಿಂಧು’ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಮೂಲಕ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯ ನಿಖರವಾದ ವಿವರಗಳನ್ನು (IFSC ಕೋಡ್ ಸೇರಿದಂತೆ) ಸರಿಯಾಗಿ ನಮೂದಿಸಬೇಕು. ಬ್ಯಾಂಕ್ ವಿವರ ಸಲ್ಲಿಕೆಯಾದ ನಂತರ ಅಧಿಕಾರಿಗಳ ತಂಡ ಅರ್ಜಿಯ ನೈಜತೆಯನ್ನು ಪರಿಶೀಲಿಸಲಿದೆ. ಎಲ್ಲವೂ ಸರಿಯಾಗಿದ್ದಲ್ಲಿ, ಅರ್ಜಿ ಸಲ್ಲಿಕೆಯಾದ ಕೇವಲ 7 ದಿನಗಳ ಒಳಗಾಗಿ NEFT ಅಥವಾ RTGS ತಂತ್ರಜ್ಞಾನದ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಿಕ್ಕಂತಾಗಿದ್ದು, ಇಂದಿನಿಂದಲೇ ಅರ್ಜಿ ಸಲ್ಲಿಕೆ ಚುರುಕುಗೊಂಡಿದೆ.














