Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ; ಆರೋಗ್ಯ ಸಂಜೀವಿನಿ ಯೋಜನೆಯಡಿ 40 ವರ್ಷ ಮೇಲ್ಪಟ್ಟವರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗೆ ಸರ್ಕಾರ ಆದೇಶ

---Advertisement---

ಬೆಂಗಳೂರು.ಜೂನ್.22: ರಾಜ್ಯ ಸರ್ಕಾರವು ತನ್ನ ನೌಕರರಿಗೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅಡಿಯಲ್ಲಿ 40 ವರ್ಷ ವಯಸ್ಸು ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ಉಚಿತವಾಗಿ ವಾರ್ಷಿಕ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ನೌಕರರಲ್ಲಿ ಹೆಚ್ಚಾಗುತ್ತಿರುವ ಮಧುಮೇಹ, ರಕ್ತದೊತ್ತಡ ಹಾಗೂ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ ಈ ಯೋಜನೆಯನ್ನು ರೂಪಿಸಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂದು ಈ ಆದೇಶವನ್ನು ಹೊರಡಿಸಿದೆ.

ಈ ಸೌಲಭ್ಯವು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in ಆಗಿರುವ) ಎಲ್ಲಾ ಸರ್ಕಾರಿ ನೌಕರರಿಗೆ ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ನಗದು ರಹಿತವಾಗಿ ಲಭ್ಯವಿರಲಿದೆ. ಆದರೆ, ಸ್ವ-ಇಚ್ಛೆಯಿಂದ ಈ ಯೋಜನೆಯಿಂದ ಹೊರಗುಳಿದ (Opt-out ಆದ) ನೌಕರರಿಗೆ ಹಾಗೂ ನೌಕರರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ವಾರ್ಷಿಕ ತಪಾಸಣೆಯ ಸೌಲಭ್ಯ ಅನ್ವಯಿಸುವುದಿಲ್ಲ. ನೌಕರರು ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಅಥವಾ ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ತಪಾಸಣೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ.

ವಾರ್ಷಿಕ ವೈದ್ಯಕೀಯ ತಪಾಸಣೆಗಾಗಿ ಸರ್ಕಾರವು ಪುರುಷ ನೌಕರರಿಗೆ ಗರಿಷ್ಠ 2,000 ರೂಪಾಯಿ ಹಾಗೂ ಮಹಿಳಾ ನೌಕರರಿಗೆ ಗರಿಷ್ಠ 2,200 ರೂಪಾಯಿಗಳ ಸಂಚಿತ ದರಗಳನ್ನು ನಿಗದಿಪಡಿಸಿದೆ. ಈ ಯೋಜನೆಯಡಿ ಸಾಮಾನ್ಯ ದೈಹಿಕ ತಪಾಸಣೆ, ರಕ್ತದೊತ್ತಡ, ಕಣ್ಣು ಮತ್ತು ಇಎನ್ಟಿ ತಪಾಸಣೆಗಳ ಜೊತೆಗೆ ರಕ್ತದ ಗ್ಲುಕೋಸ್, ಲಿಪಿಡ್ ಪ್ರೊಫೈಲ್, ಲಿವರ್ ಹಾಗೂ ಕಿಡ್ನಿ ಕಾರ್ಯನಿರ್ವಹಣಾ ಪರೀಕ್ಷೆಗಳು ಸೇರಿದಂತೆ ಹಲವು ಪ್ರಮುಖ ರೋಗನಿರ್ಣಯ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಮಹಿಳಾ ನೌಕರರಿಗೆ ಹೆಚ್ಚುವರಿಯಾಗಿ ಸ್ತನ ಹಾಗೂ ಗರ್ಭಕಂಠದ ತಪಾಸಣೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ನೌಕರರು ಒಂದೇ ಸಂಸ್ಥೆಯಲ್ಲಿ ತಪಾಸಣೆ ಪಡೆದು ಒಂದೇ ಕ್ಲೈಮ್ನಲ್ಲಿ ಇದನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Join WhatsApp

Join Now

Join Telegram

Join Now