ಸುದ್ದಿಒನ್,ಬೆಂಗಳೂರು,ಮೇ.24 : ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನೀಟ್ ಯುಜಿ (NEET-UG) ಪತ್ರಿಕೆ ಸೋರಿಕೆ ಹಗರಣದ ಬೆನ್ನಲ್ಲೇ, ಇದೀಗ ಮತ್ತೊಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಮುಂಬರುವ ಜೂನ್ 21ರಂದು ಮರು ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಈ ಆತಂಕದ ನಡುವೆಯೂ ಕರ್ನಾಟಕದ ನೀಟ್ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಒಂದು ಅತ್ಯಂತ ಖುಷಿಯ ಸುದ್ದಿ ನೀಡಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜೂನ್ 21ರಂದು ನಡೆಯಲಿರುವ ಈ ಮರು ಪರೀಕ್ಷೆಗೆ ಪ್ರಯಾಣಿಸಲು ವಿದ್ಯಾರ್ಥಿಗಳು ಸಾರಿಗೆ ಬಸ್ ಗಳಲ್ಲಿ ತಮ್ಮ ಅಧಿಕೃತ ನೀಟ್ ಪರೀಕ್ಷೆಯ ಪ್ರವೇಶ ಪತ್ರವನ್ನು (Hall Ticket) ನಿರ್ವಾಹಕರಿಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಸೌಲಭ್ಯವು KSRTC, BMTC ಸೇರಿದಂತೆ ರಾಜ್ಯದ ಎಲ್ಲಾ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ಸುಗಳಿಗೂ ಅನ್ವಯಿಸುತ್ತದೆ.ಪರೀಕ್ಷಾ ಕೇಂದ್ರಕ್ಕೆ ಹೋಗಲು ಹಾಗೂ ಪರೀಕ್ಷೆ ಮುಗಿಸಿ ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಲು ಈ ಉಚಿತ ಸೌಕರ್ಯವನ್ನು ಬಳಸಿಕೊಳ್ಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಈಗಾಗಲೇ ಸಾಕಷ್ಟು ಮಾನಸಿಕ ಕಿರಿಕಿರಿ ಹಾಗೂ ಗೊಂದಲಗಳನ್ನು ಎದುರಿಸಿದ್ದಾರೆ. ಈಗ ಮತ್ತೊಮ್ಮೆ ಪರೀಕ್ಷೆ ಎದುರಿಸಬೇಕಾಗಿ ಬಂದಿರುವುದು ಅವರಿಗೆ ಆರ್ಥಿಕವಾಗಿ ಹಾಗೂ ದೈಹಿಕವಾಗಿ ದೊಡ್ಡ ಸವಾಲಾಗಿದೆ. ಹೀಗಾಗಿ, ನಮ್ಮ ರಾಜ್ಯದ ಯಾವುದೇ ವಿದ್ಯಾರ್ಥಿಗೆ ದೂರದ ಊರುಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಸಾರಿಗೆ ವೆಚ್ಚದ ಸಮಸ್ಯೆಯಾಗಬಾರದು ಎಂಬ ಧಾವಂತದಿಂದ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ವಿವರಿಸಿದರು.










