ಚಿತ್ರದುರ್ಗ: ಜೂನ್ 25 ರಿಂದ ರಸಗೊಬ್ಬರ ಮಾರಾಟ ಅಪ್ಲಿಕೇಶನ್ ವ್ಯವಸ್ಥೆ ಜಾರಿ :
ರೈತರು ರಸಗೊಬ್ಬರದ ಅಗತ್ಯವನ್ನು ಎರಡು ದಿನ ಮುಂಗಡವಾಗಿ ದಾಖಲಿಸಬಹುದು
ಚಿಲ್ಲರೆ ಮಾರಾಟ ಕೇಂದ್ರಗಳಿಂದ ರಸಗೊಬ್ಬರ ಖರೀದಿಸಲು ನೆರವು
ಚಿತ್ರದುರ್ಗ. ಜೂನ್. 24: ರೈತರಿಗೆ ಸಕಾಲದಲ್ಲಿ ಮತ್ತು ಸುಲಭವಾಗಿ ರಸಗೊಬ್ಬರ ವಿತರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಶನ್ ಸಿಸ್ಟಮ್’ ತಂತ್ರಾಂಶ ಆಧಾರಿತ ರಸಗೊಬ್ಬರ ವಿತರಣಾ ವ್ಯವಸ್ಥೆಯು ಇದೇ ಜೂನ್ 25 ರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಬರಲಿದೆ.
ರಾಷ್ಟ್ರಮಟ್ಟದ ‘ಫ್ರೇಮ್‍ವರ್ಕ್ ಫಾರ್ ಫರ್ಟಿಲೈಸರ್ ಸೇಲ್’ ಯೋಜನೆಯಡಿ ಈ ಹೊಸ ಡಿಜಿಟಲ್ ವ್ಯವಸ್ಥೆ ತರಲಾಗುತ್ತಿದ್ದು, ರಾಜ್ಯದಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೇ ಜೂನ್ 25ರಂದು ಮಧ್ಯಾಹ್ನ 3ಕ್ಕೆ ಚಿತ್ರದುರ್ಗ ನಗರದ ಟಿಪಿಎಂಎಸ್ ಆವರಣದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಅವರ ಸಮ್ಮುಖದಲ್ಲಿ ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಶನ್ ಸಿಸ್ಟಮ್’ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
ಈ ಹೊಸ ವ್ಯವಸ್ಥೆಯಡಿ ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಎರಡು ದಿನ ಮುಂಗಡವಾಗಿ ತಂತ್ರಾಂಶದ ಮೂಲಕ ಕಾಯ್ದಿರಿಸಬಹುದು. ಇದರಿಂದ ಅಗತ್ಯ ಪ್ರಮಾಣದ ದಾಸ್ತಾನು ಮುಂಚಿತವಾಗಿಯೇ ವ್ಯವಸ್ಥೆಗೊಳ್ಳುತ್ತದೆ. ರೈತರಿಗೆ ಸುಗಮ ಹಾಗೂ ನಿರೀಕ್ಷಿತ ಸೇವೆ ಸಕಾಲದಲ್ಲಿ ದೊರೆಯುತ್ತದೆ. ರಸಗೊಬ್ಬರ ಮಾರಾಟ ಚೌಕಟ್ಟು ರೈತರ ಸ್ನೇಹಿ ಮತ್ತು ಸರಳ ವಿಧಾನವನ್ನು ಪರಿಚಯಿಸುತ್ತದೆ. ರೈತರು ಮತ್ತು ಕೃಷಿಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ಖರೀದಿಗೂ ಡಿಜಿಟಲ್ ಮೂಲಕ ಮುಂಗಡ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿಯನ್ನು ದೃಢೀಕರಿಸಿದ ನಂತರ ಆಯ್ಕೆ ಮಾಡಿದ ಅಂಗಡಿಯಿಂದ ಅನುದಾನಿತ ರಸಗೊಬ್ಬರವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇದರಿಂದ ರೈತರ ಸಮಯ ಮತ್ತು ಶ್ರಮ ಉಳಿತಾಯವಾಗುತ್ತದೆ. ಇದರಿಂದಾಗಿ ಅಂಗಡಿ ಮಟ್ಟದ ದಾಸ್ತಾನು ನಿರ್ವಹಣೆ, ರಸಗೊಬ್ಬರ ಸಾಗಣೆ ಹಾಗೂ ಹತ್ತಿರದ ರಸಗೊಬ್ಬರ ಮರಾಟ ಮಳಿಗೆಯ ಗುರುತು ಪರಿಶೀಲನೆ ನಿರ್ವಹಿಸಿ, ರೈತರಿಗೆ ಹೆಚ್ಚು ವಿಶ್ವಾಸಾರ್ಹ, ಪಾರದರ್ಶಕ ಮತ್ತು ಅನುಕೂಲಕರವಾದ ರಸಗೊಬ್ಬರ ವಿತರಣಾ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನಹರಿಸಬಹುದಾಗಿರುತ್ತದೆ.
ಜಿಲ್ಲೆಯಲ್ಲಿ ಅಧಿಕೃತವಾಗಿ ರಸಗೊಬ್ಬರ ಪರವಾನಗಿ ಹೊಂದಿರುವ 434 ಖಾಸಗಿ ರಸಗೊಬ್ಬರ ಮಾರಾಟಗಾರರು, 67 ಸಹಕಾರ ಸಂಘಗಳು ಹಾಗೂ 27 ರೈತ ಉತ್ಪಾದಕ ಸಂಸ್ಥೆಗಳ ಸಿಬ್ಬಂದಿಗೆ ಈಗಾಗಲೇ ಈ ತಂತ್ರಾಂಶದ ಕುರಿತು ತರಬೇತಿ ನೀಡಲಾಗಿದ್ದು, ರೈತರು ರಸಗೊಬ್ಬರ ಮಾರಾಟಗಾರರ ಸೇವೆಯನ್ನು ತಂತ್ರಾಂಶದ ಮೂಲಕ ರಸಗೊಬ್ಬರ ಮುಂಗಡವಾಗಿ ಕಾಯ್ದರಿಸಲು ಉಪಯೋಗಿಸಿಕೊಳ್ಳಬಹುದಾಗಿದೆ. ಇದಲ್ಲದೇ, ಕೃಷಿ ಇಲಾಖೆಯ ವಿಸ್ತರಣಾಧಿಕಾರಿಗಳು, ಸಾಮಾನ್ಯ ಸೇವಾ ಕೇಂದ್ರ ಮತ್ತು ಕೃಷಿ ಸಖಿಯರ ಮೂಲಕವು ಸಹ ರೈತರು ಮುಂಗಡವಾಗಿ ರಸಗೊಬ್ಬರಗಳನ್ನು ತಂತ್ರಾಂಶದ ಮೂಲಕ ಕಾಯ್ದಿರಿಸಿಕೊಳ್ಳಬಹುದಾಗಿದೆ.
ರಸಗೊಬ್ಬರ ಕಾಯ್ದಿರಿಸಲು ರೈತರು ಆಧಾರ್ ಜೋಡಣೆ ಹೊಂದಿರುವ ‘ಕೇಂದ್ರೀಯ ಎಫ್.ಐ.ಡಿ’ ಹೊಂದಿರುವುದು ಕಡ್ಡಾಯವಾಗಿದೆ. ಹಾಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಂದ್ರಿಯ ಎಫ್‍ಐಡಿ ಹೊಂದಿರುವ ಮತ್ತು ಎಫ್‍ಐಡಿಯೊಂದಿಗೆ ಸರ್ವೆ ನಂಬರ್ ಸೇರಿಸಲು ಬಾಕಿ ಇರುವ ರೈತರ ಭೂ ಹಿಡುವಳಿ ವಿವರ ಇಂತಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 18,723, ಚಳ್ಳಕೆರೆಯಲ್ಲಿ 50,277, ಚಿತ್ರದುರ್ಗದಲ್ಲಿ 49,882, ಹೊಳಲ್ಕೆರೆಯಲ್ಲಿ 36,235, ಹೊಸದುರ್ಗದಲ್ಲಿ 36,134 ಮತ್ತು ಹಿರಿಯೂರಿನಲ್ಲಿ 39,255 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 2,30,506 ಕೇಂದ್ರೀಯ ಎಫ್.ಐ.ಡಿಗಳು ಸೃಜನೆಯಾಗಿವೆ. ಆದರೆ ಇನ್ನು ಕೂಡ ಜಿಲ್ಲೆಯಾದ್ಯಂತ 30,346 ಎಫ್.ಐ.ಡಿಗಳು ಸಿಂಕ್ ಆಗಲು ಬಾಕಿ ಇವೆ. ಹಾಗೆಯೇ ಫ್ರೂಟ್ಸ್ ತಂತ್ರಾಂಶದಲ್ಲಿ ಜಿಲ್ಲೆಯ ಒಟ್ಟು 4,78,730 ಭೂಹಿಡುವಳಿಗಳು ದಾಖಲಾಗಿದ್ದು, ಇನ್ನೂ 1,58,721 ಹಿಡುವಳಿಗಳನ್ನು ಸೇರಿಸುವುದು ಬಾಕಿ ಉಳಿದಿದೆ.
ರೈತರು ತಮ್ಮ ಭೂ ಹಿಡುವಳಿಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸಲು ಮತ್ತು ಈಗಾಗಲೇ ಎಫ್‍ಐಡಿ ಹೊಂದಿರುವ ರೈತರು ಕೇಂದ್ರಿಯ ಎಫ್‍ಐಡಿ ಯೊಂದಿಗೆ ಸಂಯೋಜನೆ ಮಾಡಿಸಲು ಹತ್ತಿರದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ಪ್ರಕಟಣೆಯಲ್ಲಿ ಕೋರಿದ್ದಾರೆ.
============
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














