ಬೆಂಗಳೂರು.ಜುಲೈ.06 :ರಾಜ್ಯ ಸರ್ಕಾರವು ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಇಲ್ಲದ ಕಾರಣಕ್ಕೆ ಶಾಶ್ವತ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದ ವಸತಿ ಕಟ್ಟಡಗಳ ಮಾಲೀಕರಿಗೆ ಸಿಹಿಸುದ್ದಿ ನೀಡಿದೆ. ನಿಯಮಾವಳಿಗಳ ಪ್ರಕಾರ ನಿಗದಿಯಾಗಿದ್ದ ಗಡುವನ್ನು ಇದೀಗ ಆಗಸ್ಟ್ 15 ರವರೆಗೆ ವಿಸ್ತರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2400 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ, ಶೇಕಡಾ 20ರಷ್ಟು ಹೆಚ್ಚುವರಿ ವ್ಯತ್ಯಾಸಗಳೊಂದಿಗೆ ನಿರ್ಮಾಣಗೊಂಡಿರುವ ವಸತಿ ಕಟ್ಟಡಗಳಿಗೆ ಈ ವಿನಾಯಿತಿ ಅನ್ವಯಿಸಲಿದೆ. ಈ ಹಿಂದೆ ಮೇ 31ರ ಒಳಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಮಾತ್ರ ಈ ಸೌಲಭ್ಯ ಸೀಮಿತಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಹಲವು ನಾಗರಿಕರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ಅರಿತ ಸರ್ಕಾರ, ತನ್ನ ನಿರ್ಧಾರವನ್ನು ಬದಲಿಸಿದೆ.
ಹೊಸ ಆದೇಶದ ಪ್ರಕಾರ, ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಈಗಾಗಲೇ ಕಟ್ಟಡ ಕಾಮಗಾರಿ ಮುಗಿಸಿರುವವರು ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಹೊಸದಾಗಿ ಮನೆ ನಿರ್ಮಿಸಿ ಪೂರ್ಣಗೊಳಿಸಿರುವ ಮಾಲೀಕರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕೇವಲ ಹಳೆಯ ಅರ್ಜಿಗಳಿಗಷ್ಟೇ ಸೀಮಿತಗೊಳಿಸಿದರೆ ಹೆಚ್ಚಿನ ಜನರಿಗೆ ಇದರ ಲಾಭ ಸಿಗುತ್ತಿರಲಿಲ್ಲ. ಈ ಕಾರಣದಿಂದಾಗಿ, ಆದೇಶ ಹೊರಬಿದ್ದ 15 ದಿನಗಳ ಅವಧಿಯಲ್ಲಿ ನಿಯಮಾವಳಿಗೆ ಒಳಪಡುವ ಎಲ್ಲಾ ಕಟ್ಟಡ ಮಾಲೀಕರು ಹೊಸದಾಗಿ ಅರ್ಜಿ ಸಲ್ಲಿಸಿ ಶಾಶ್ವತ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೇ (ಆಗಸ್ಟ್ 15) ಈ ಗಡುವು ಮುಕ್ತಾಯಗೊಳ್ಳಲಿದ್ದು, ಮನೆ ಮಾಲೀಕರು ತಕ್ಷಣವೇ ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.

















