ಸುದ್ದಿಒನ್,ಮೈಸೂರು,ಜೂನ್.02: ರಾಜ್ಯ ರಾಜಕಾರಣದಲ್ಲಿ ಈಗ ಮತ್ತೊಂದು ಹೊಸ ಸಂಚಲನ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ (DCM) ಹುದ್ದೆ ನೀಡಬೇಕು ಎಂದು ಆಗ್ರಹಿಸಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೀದಿಗಿಳಿದು ಬೃಹತ್ ಹೋರಾಟ ಆರಂಭಿಸಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ರಾಮಸ್ವಾಮಿ ವೃತ್ತದಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಸಿದ್ದರಾಮಯ್ಯ ಮತ್ತು ಡಾ. ಯತೀಂದ್ರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಮೈಸೂರು ಭಾಗದ ಸಮಗ್ರ ಪ್ರಗತಿ ಹಾಗೂ ಪಕ್ಷದ ಸಂಘಟನೆಗಾಗಿ ಯತೀಂದ್ರ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರದಲ್ಲಿ ಸೂಕ್ತ ಹಾಗೂ ಪ್ರಭಾವಿ ಸ್ಥಾನಮಾನ ಸಿಗಲೇಬೇಕು ಎನ್ನುವುದು ಸದ್ಯ ಅಭಿಮಾನಿಗಳ ಬಿಗಿಪಟ್ಟಾಗಿದೆ.

ಪ್ರತಿಭಟನೆಯ ಮುಂಚೂಣಿಯಲ್ಲಿರುವ ಯುವ ಕಾಂಗ್ರೆಸ್ ನಾಯಕರು ಹೈಕಮಾಂಡ್ ಗೆ ನೇರ ಮನವಿ ಮಾಡಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಮೈಸೂರು ಭಾಗದ ರಾಜಕೀಯಕ್ಕೆ ಮತ್ತಷ್ಟು ಆನೆಬಲ ತುಂಬಬೇಕು. ಹೈಕಮಾಂಡ್ ತಕ್ಷಣವೇ ಕಾರ್ಯಕರ್ತರ ಈ ಒಕ್ಕೊರಲ ಧ್ವನಿಗೆ ಓಗೊಟ್ಟು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ತೀವ್ರವಾಗಿ ಒತ್ತಾಯಿಸಿದ್ದಾರೆ.










