Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿತರಕನಿಂದ ಸಂಪಾದಕನ ತನಕ : ಚಿತ್ರದುರ್ಗ ಪತ್ರಿಕಾ ರಂಗದ ‘ಲಕ್ಷ್ಮಣ್’ ಅವರಿಗೆ 60 ರ ಸಂಭ್ರಮ : ಜನ್ಮದಿನ ವಿಶೇಷ ಲೇಖನ..!

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂ. 01: ಅದು 1983… 17ರ ಹರೆಯದ ಹುಡುಗ, ಹೆಗಲ ಮೇಲೆ ಪ್ರಜಾವಾಣಿ ಪತ್ರಿಕೆ ಬಂಡಲ್. ಚಿತ್ರದುರ್ಗದ ಗಾಂಧಿ ಸರ್ಕಲ್. ಮುಂಜಾನೆ ಇಡೀ ಊರು ನಿದ್ರೆಯಲ್ಲಿದ್ದಾಗ, ಸೈಕಲ್ ಬೆಲ್ ಸದ್ದು ಮಾಡಿಕೊಂಡು ಒಬ್ಬ ಹುಡುಗ ಬರುತ್ತಾನೆ. ಹೆಗಲ ಮೇಲೆ ‘ಪ್ರಜಾವಾಣಿ’ ಪತ್ರಿಕೆ. ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಮನೆ-ಮನೆಗೆ ಪತ್ರಿಕೆ ಹಂಚುತ್ತಿದ್ದ ಆ ಹುಡುಗನ ಹೆಸರು – ಲಕ್ಷ್ಮಣ್.

ಆಗ ಯಾರಿಗೂ ಗೊತ್ತಿರಲಿಲ್ಲ, ಪತ್ರಿಕೆ ಹಂಚುತ್ತಿದ್ದ ಆ ಹುಡುಗನೇ ಮುಂದೊಂದು ದಿನ ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ರಂಗದಲ್ಲಿ ಎಲ್ಲಾ ಹಂತಗಳನ್ನು ದಾಟಿ ಎತ್ತರಕ್ಕೆ ಇಷ್ಟು ಬೆಳೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

ಇಂದು, ಜೂನ್ 1, 2026. ಆ ‘ಪತ್ರಿಕೆಯ ಚಿರ ಯುವಕ’ ಲಕ್ಷ್ಮಣ್ ಅವರಿಗೆ 60 ನೇ ಹುಟ್ಟುಹಬ್ಬ. 1983ರಿಂದ 2026ರವರೆಗೆ – ಸುದೀರ್ಘ 43 ವರ್ಷಗಳ ಕಾಲ ಶಾಯಿ-ಕಾಗದ-ಸೈಕಲ್ ಜೊತೆಗಿನ ಅವಿನಾಭಾವ ಸಂಬಂಧಕ್ಕೆ ಒಂದು ನಮನ.

01-06-1966 ರಂದು ಹಿರಿಯೂರು ತಾಲ್ಲೂಕಿನ ಬಂಡ್ಲಾರಹಟ್ಟಿಯಲ್ಲಿ ಜನನ. ತಂದೆ-ತಾಯಿ ಕೃಷಿಕರು. 1 ರಿಂದ 4ನೇ ತರಗತಿ ಬಂಡ್ಲಾರಹಟ್ಟಿ ಕಿರಿಯ ಪ್ರಾಥಮಿಕ ಶಾಲೆ. 5 ರಿಂದ 7ನೇ ತರಗತಿ ಮರಡಿಹಳ್ಳಿ ಹಿರಿಯ ಪ್ರಾಥಮಿಕ ಶಾಲೆ. ನಂತರ 8 ರಿಂದ 10ನೇ ತರಗತಿಯವರೆಗೂ ಓದಿದ್ದು ಮರಡಿಹಳ್ಳಿಯಲ್ಲಿಯೇ. 1983ರಲ್ಲಿ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದದ್ದು.

ಓದು + ದುಡಿಮೆ = ಲಕ್ಷ್ಮಣ್ ಫಾರ್ಮುಲಾ: 1983-84 ಮತ್ತು 84-85 ರಲ್ಲಿ ಎಸ್‌ಜೆಎಂ ಸಂಜೆ ಕಾಲೇಜಿನಲ್ಲಿ ಪಿಯುಸಿ. ಹಗಲು ಪತ್ರಿಕೆ ಹಂಚುವುದು, ರಾತ್ರಿ ಕಾಲೇಜು. 1985ರಲ್ಲಿ ಕಬೀರಾನಂದ ಸ್ವಾಮಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಿಪಿಇಡಿ ತರಬೇತಿ. ಅದೇ ವರ್ಷ ‘ಪತ್ರಿಕೆ ಹಂಚಿಕೆ’ ಜೊತೆಗೆ ‘ಸುದ್ದಿ ಹಂಚಿಕೆ’ಯೂ ಶುರು!

1986ರಲ್ಲಿ ಎಸ್‌ಜೆಎಂ ಕಾಲೇಜಿನಲ್ಲಿ ಬಿ.ಎ. ಪದವಿ. ಆಗಲೇ ಪ್ರಜಾವಾಣಿಯ ಅಂದಿನ ವರದಿಗಾರ ಪಿ.ಆರ್.ನಾರಾಯಣರಾವ್ ಅವರ ಕಚೇರಿ ಸಹಾಯಕ. ‘ಸುದ್ದಿ ಅಂದ್ರೆ ಏನು? ಅದನ್ನು ಹೆಕ್ಕೋದು ಹೇಗೆ?’ ಎಂದು ಕಲಿತದ್ದು ಅಲ್ಲೇ. 1983ರಲ್ಲಿ ಪ್ರಜಾವಾಣಿ ವಿತರಕನಾಗಿ ಶುರುವಾದ ಪಯಣ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭದ ಏಜೆಂಟ್‌ವರೆಗೂ ವಿಸ್ತರಿಸಿತು. ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜ್ ಅವರ ಒಡನಾಟದಲ್ಲಿ ‘ಸುದ್ದಿಯ ಮೌಲ್ಯ’ ಅರ್ಥವಾಯಿತು. 1990 ದಾವಣಗೆರೆ ‘ಹೊಯ್ಸಳ’ ಪತ್ರಿಕೆಯಲ್ಲಿ ಅಧಿಕೃತ ವರದಿಗಾರ. ನೈಜ ಸುದ್ದಿ ಬರೆದಿದ್ದಕ್ಕೆ 1992 ಸೆಪ್ಟೆಂಬರ್ 27ರಂದು ಹೋರಾಟಗಾರರಿಂದ ಪ್ರತಿಭಟನೆ. ‘ಪತ್ರಕರ್ತನಾದವನು ಸತ್ಯಕ್ಕೆ ಬದ್ಧ, ಸಂಘಟನೆಗಲ್ಲ’ ಎಂದು ಬೀದಿಗೆ ಬಂದು ಸ್ವತಂತ್ರವಾಗಿ ನಿಂತರು.

1994ರಲ್ಲಿ ದಾವಣಗೆರೆ ‘ಜನಮಿಡಿತ’ ದಿನಪತ್ರಿಕೆಗೆ ಸುದ್ದಿ ಸಂಪಾದಕ. 1995ರಲ್ಲಿ ತಮ್ಮದೇ ‘ಲಕ್ಷ್ಮಣ್ ವಾಯ್ಸ್’ ವಾರಪತ್ರಿಕೆ ಆರಂಭ. ಎರಡೂವರೆ ದಶಕಗಳ ಕಾಲ ಚಿತ್ರದುರ್ಗ ಜಿಲ್ಲೆಯ ಜನಪ್ರಿಯ ದನಿಯಾಯಿತು.

ಅಂದಿನಿಂದ ಜಿಲ್ಲೆಯಲ್ಲಿ ಲಕ್ಷ್ಮಣ್ ವಾಯ್ಸ್ ಎಂದೇ ಚಿರಪರಿಚಿತರಾದರು. ಕೇವಲ ಸುದ್ದಿ ಬರೆದವರಲ್ಲ, ಪತ್ರಕರ್ತರನ್ನು ಕಟ್ಟಿದವರು.

2002-2008: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ.
2008-2011: ಜಿಲ್ಲಾಧ್ಯಕ್ಷ. 2013-14ರಲ್ಲಿ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಇತಿಹಾಸ ಬರೆದರು.
2011-2014: ಕಾರ್ಯದರ್ಶಿ. 2014-2018: ರಾಜ್ಯ ಸಂಘಕ್ಕೆ ನಿರ್ದೇಶಕ. 2018- 2021 ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಸೇವೆ.
ಸಂಘಟನೆಯಲ್ಲಿನ ಇವರ ಸೇವೆಗೆ ರಾಜ್ಯ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ‘ಹೊಂಬಾಳೆ ಪ್ರಶಸ್ತಿ’ ನೀಡಿ ಗೌರವಿಸಿತು. 2023-24ನೇ ಸಾಲಿನಲ್ಲಿ ಜಿಲ್ಲಾಡಳಿತದಿಂದ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯೂ ಲಭಿಸಿತು.

ಇಷ್ಟೇ ಅಲ್ಲದೇ, 2020 ರಲ್ಲಿ ಪತ್ರಿಕಾ ವಿತರಕರ ಸಂಘ ಸ್ಥಾಪನೆಗೆ ನೆರವಾಗಿ, ಗೌರವಾಧ್ಯಕ್ಷರಾಗಿ ಅವರ ಬದುಕಿಗೂ ಬೆಳಕಾದರು.

ಇಂದಿಗೂ ಮುಂಜಾನೆ 2:30ಕ್ಕೆ ಗಾಂಧಿ ಸರ್ಕಲ್ ನಲ್ಲಿ!
ಇದು ಲಕ್ಷ್ಮಣ್ ಅವರ ಜೀವನದ ಅತ್ಯಂತ ಸ್ಫೂರ್ತಿದಾಯಕ ಸಂಗತಿ. 60 ನೇ ವಯಸ್ಸಿನಲ್ಲೂ, ‘ಕ್ರಾಂತಿ ದೀಪ’ ಪ್ರಾದೇಶಿಕ ದಿನಪತ್ರಿಕೆಯ ಮಾನ್ಯತೆ ಪಡೆದ ಛಾಯಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಾ ಇಂದಿಗೂ ಮುಂಜಾನೆ 2:30ಕ್ಕೆ ಗಾಂಧಿ ಸರ್ಕಲ್‌ಗೆ ಬರುತ್ತಾರೆ. ಬಂದು ಇಲ್ಲಿಂದ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ  ಪ್ರಾದೇಶಿಕ ಮತ್ತು ಇಲ್ಲಿನ ಸ್ಥಳೀಯ ಪತ್ರಿಕೆಗಳೂ ಸೇರಿದಂತೆ ಹಲವು ರಾಜ್ಯ ಮಟ್ಟದ ಪತ್ರಿಕೆಗಳನ್ನು, ಹೊರಜೆಲ್ಲೆ ಮತ್ತು ಜಿಲ್ಲೆಯ ಮೂಲೆ-ಮೂಲೆಗೂ ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ.

ಬಹಳ ಕಷ್ಟ ಜೀವಿ. ಮನನ ಆಗಿದ್ದಾರೆ. ಈ ಒಂದು ಸಾಲು ಲಕ್ಷ್ಮಣ್ ಅವರ 43 ವರ್ಷದ ಪತ್ರಿಕಾ ತಪಸ್ಸಿಗೆ ಹಿಡಿದ ಕನ್ನಡಿ.

ಲಕ್ಷ್ಮಣ್ ಅಂದರೆ ‘ಪತ್ರಿಕಾ ವಿಶ್ವವಿದ್ಯಾಲಯ’ : 

ವಿತರಕ, ಏಜೆಂಟ್, ವರದಿಗಾರ, ಸುದ್ದಿ ಸಂಪಾದಕ, ಸಂಪಾದಕ, ಸಂಘಟಕ, ಛಾಯಾ ವರದಿಗಾರ – ಪತ್ರಿಕೋದ್ಯಮದ ಎಲ್ಲಾ ಮೆಟ್ಟಿಲುಗಳನ್ನು ಹತ್ತಿ ಇಳಿದವರು ಲಕ್ಷ್ಮಣ್. ಅವರ ಬದುಕೇ ಒಂದು ‘ಪತ್ರಿಕಾ ವಿಶ್ವವಿದ್ಯಾಲಯ’.

ಬಂಡ್ಲಾರಹಟ್ಟಿಯ ಪುಟ್ಟ ಹುಡುಗ, ಸೈಕಲ್ ತುಳಿದು ಪತ್ರಿಕೆ ಹಾಕುತ್ತಾ, ಚಿತ್ರದುರ್ಗದ ಪತ್ರಿಕಾ ರಂಗದ ‘ಲಕ್ಷ್ಮಣ್ ರೇಖೆ’ಯಾದ ಕಥೆ ಇದು. ಈ ರೇಖೆ ದಾಟಲು ಯಾರಿಗೂ ಸಾಧ್ಯವಿಲ್ಲ, ಏಕೆಂದರೆ ಇದು ಪ್ರಾಮಾಣಿಕತೆ, ದುಡಿಮೆ ಮತ್ತು ಬದ್ಧತೆಯಿಂದ ಎಳೆದ ಗೆರೆ.

ಜೂನ್ 1, 1966 ರಿಂದ ಜೂನ್ 1, 2026 ರವರೆಗೆ – 60 ವರ್ಷ.
1983 ರಿಂದ 2026 ರವರೆಗೆ – 43 ವರ್ಷದ ಪತ್ರಿಕಾ ಸೇವೆ.

ಪತ್ರಕರ್ತರ ಸಂಘ ಕೆಲವೇ ಜನರಿಗೆ ಸೀಮಿತವೆಂಬ ಸಿದ್ಧ ಮಾದರಿ ಧಿಕ್ಕರಿಸಿ ಅನೇಕರಿಗೆ ಸದಸ್ಯತ್ವ ಕೊಟ್ಟು, ಪದಾಧಿಕಾರಗಳನ್ನಾಗಿಸಿದರು. ಎಲ್ಲರನ್ನು ತಮ್ಮವರೆಂದೇ ಪ್ರೀತಿಸುವ ಗುಣ ಅವರದ್ದು. ಈ ಕಾರಣಕ್ಕೆ ಲಕ್ಷ್ಮಣ್ ವಾಯ್ಸ್ ಎಂದರೇ ಜಿಲ್ಲೆಯ ಜನರಿಗೆ ಅತ್ಯಂತ ಪ್ರೀತಿ.

ಈ ದಿನ ಅವರ ಹುಟ್ಟುಹಬ್ಬ, ಚಿತ್ರದುರ್ಗದ ಪತ್ರಿಕಾ ಲೋಕ ಹೇಳುತ್ತಿದೆ: ‘ಹ್ಯಾಪಿ ಬರ್ತ್‌ಡೇ ಲಕ್ಷ್ಮಣ್ ಸರ್. ನೀವು ನಮಗೆ ದಾರಿ ದೀಪ. ನೀವು ನೂರ್ಕಾಲ ಬದುಕಿ ಎಂದು…..!

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now