Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉದ್ಯೋಗ ಖಾತ್ರಿಯಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಫಲವೃಕ್ಷೋದ್ಯಾನ: ಸಚಿವ ಈಶ್ವರ ಖಂಡ್ರೆ ಸೂಚನೆ

---Advertisement---

ಬೆಂಗಳೂರು.ಜುಲೈ.25: ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳಲ್ಲಿ ‘ಫಲವೃಕ್ಷೋದ್ಯಾನ’ ಅಭಿವೃದ್ಧಿಪಡಿಸಿ, ಅವುಗಳನ್ನು ವಾರ್ಷಿಕ ಆಧಾರದ ಮೇಲೆ ಪಾರದರ್ಶಕವಾಗಿ ಹರಾಜು ಮಾಡುವ ಮೂಲಕ ಸ್ಥಳೀಯ ನಿರುದ್ಯೋಗಿ ಹಾಗೂ ಭೂರಹಿತ ಯುವಜನರಿಗೆ ಗುತ್ತಿಗೆ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಇಲಾಖೆಯ ಕಾರ್ಯದರ್ಶಿಯವರಿಗೆ ಅಧಿಕೃತ ಟಿಪ್ಪಣಿ ರವಾನಿಸಿರುವ ಸಚಿವರು, ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತಕ್ಷಣವೇ ಕ್ರಿಯಾ ಯೋಜನೆ ರೂಪಿಸುವಂತೆ ನಿರ್ದೇಶಿಸಿದ್ದಾರೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಭೂಮಿಯಲ್ಲಿ ಮಾವು, ಸಪೋಟ, ಬೆಟ್ಟನೆಲ್ಲಿಕಾಯಿ, ತೆಂಗು, ಹೈಬ್ರಿಡ್ ನೇರಳೆ ಹಾಗೂ ಹುಣಸೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಸುವುದರಿಂದ ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆಗೆ ಆರ್ಥಿಕ ಆದಾಯ ಹರಿದುಬರಲಿದೆ. ಈ ಯೋಜನೆಯಿಂದ ಗ್ರಾಮಗಳಲ್ಲಿ ಹಸಿರು ಹೊದಿಕೆ ಹೆಚ್ಚಾಗುವುದರ ಜೊತೆಗೆ ಹಕ್ಕಿ-ಪಕ್ಷಿಗಳಿಗೆ ಆಹಾರ ಲಭ್ಯವಾಗುತ್ತದೆ. ಅತ್ಯಂತ ಮುಖ್ಯವಾಗಿ, ಸರ್ಕಾರಿ ಭೂಮಿ ಒತ್ತುವರಿಯಾಗುವುದನ್ನು ಸಂಪೂರ್ಣವಾಗಿ ತಡೆಯಲು ಇದು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಯೋಜನೆಗಳಿಗೆ ಈ ಭೂಮಿಯ ಅಗತ್ಯ ಬಿದ್ದಾಗ ಮರಗಳನ್ನು ತೆರವುಗೊಳಿಸಿ ಭೂಬಳಕೆ ಮಾಡಲು ಅವಕಾಶವಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಗಳಲ್ಲಿ ಹುಣಸೆ ಮತ್ತು ಮಾವು ಮುಂತಾದ ಮರಗಳನ್ನು ನೆಟ್ಟು ಬೆಳೆಸಲು ಯೋಜಿಸಲಾಗಿದೆ. ಈ ಮರಗಳನ್ನೂ ಸಹ ವಾರ್ಷಿಕ ಆಧಾರದಲ್ಲಿ ಸ್ಥಳೀಯರಿಗೆ ಹರಾಜು ಮೂಲಕ ಗುತ್ತಿಗೆ ನೀಡುವುದರಿಂದ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಆರ್ಥಿಕ ಬೆಂಬಲ ಸಿಗಲಿದ್ದು, ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಈ ಹಣವನ್ನು ಬಳಸಿಕೊಳ್ಳಬಹುದು. ವಿಬಿಸಿ ರಾಮ್ ಜಿ ಸಹಯೋಗದಲ್ಲಿ ಈ ಫಲವೃಕ್ಷೋದ್ಯಾನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಚಿವರು ಸೂಚಿಸಿದ್ದಾರೆ.

Join WhatsApp

Join Now

Join Telegram

Join Now