Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇನ್ಮುಂದೆ ಅಪರಿಚಿತ ಕರೆ ಬಂದರೂ ಸ್ಕ್ರೀನ್ ಮೇಲೆ ಕಾಣಿಸಲಿದೆ ಕರೆ ಮಾಡಿದವರ ಹೆಸರು

---Advertisement---

ನವದೆಹಲಿ : ದೇಶದಲ್ಲಿ ಮೊಬೈಲ್ ಬಳಕೆದಾರರಿಗೆ ಬರುವ ಅಪರಿಚಿತ ಕರೆಗಳ ನಿಯಂತ್ರಣ ಹಾಗೂ ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ದೂರಸಂಪರ್ಕ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ.

ನವೆಂಬರ್ 1 ರಿಂದ ಮೊಬೈಲ್‌ನಲ್ಲಿ ಸೇವ್ ಆಗಿರದ ಯಾವುದೇ ಹೊಸ ನಂಬರ್‌ನಿಂದ ಕರೆ ಬಂದರೂ, ಕೇವಲ ಸಂಖ್ಯೆ ಮಾತ್ರವಲ್ಲದೆ ಕರೆ ಮಾಡುತ್ತಿರುವ ವ್ಯಕ್ತಿಯ ಅಧಿಕೃತ ಹೆಸರೂ ಸಹ ಮೊಬೈಲ್ ಪರದೆಯ ಮೇಲೆ ಕಡ್ಡಾಯವಾಗಿ ಕಾಣಿಸಿಕೊಳ್ಳಲಿದೆ. ಈ ಕುರಿತು ಅಕ್ಟೋಬರ್ 13 ರಂದು ಸುತ್ತೋಲೆ ಹೊರಡಿಸಿರುವ ದೂರಸಂಪರ್ಕ ಇಲಾಖೆಯು, ತನ್ನ ಎಲ್ಲಾ ಸೇವಾ ವಲಯಗಳಲ್ಲಿ ‘ಕಾಲಿಂಗ್ ನೇಮ್ ಪ್ರೆಸೆಂಟೇಶನ್’ (CNAP) ಸೇವೆಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಗ್ರಾಹಕರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ

ಈ ಸೇವೆಯನ್ನು ಸಕ್ರಿಯಗೊಳಿಸಲು ಮೊಬೈಲ್ ಗ್ರಾಹಕರು ಯಾವುದೇ ಪ್ರತ್ಯೇಕ ವಿನಂತಿ ಅಥವಾ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಟೆಲಿಕಾಂ ಕಂಪನಿಗಳೇ ಸ್ವಯಂಚಾಲಿತವಾಗಿ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಿವೆ. ಹೊಸ ವ್ಯವಸ್ಥೆಯ ಅನ್ವಯ, ಕರೆ ಬಂದಾಗ ಮೊಬೈಲ್ ಪರದೆಯಲ್ಲಿ ಎಂದಿನಂತೆ ದೂರವಾಣಿ ಸಂಖ್ಯೆ ಕಾಣಿಸುವುದರ ಜತೆಗೆ, ಅದರ ಕೆಳಗಿನ ಎರಡನೇ ಸಾಲಿನಲ್ಲಿ ಕರೆ ಮಾಡಿದವರ ಹೆಸರು ಮೂಡಲಿದೆ. ಒಂದು ವೇಳೆ ಆ ನಂಬರ್ ಸ್ವೀಕರಿಸುವವರ ಫೋನ್ ಕಾಂಟ್ಯಾಕ್ಟ್ ಪಟ್ಟಿಯಲ್ಲಿ ಮೊದಲೇ ಸೇವ್ ಆಗಿದ್ದರೆ, ಆ ಸೇವ್ ಮಾಡಲಾದ ಹೆಸರೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತದೆ.

ದೇಶಿ ಮತ್ತು ವಿದೇಶಿ ಕರೆಗಳ ನಿಯಮ

ನಂಬರ್ ಸೇವ್ ಆಗಿರದ ದೇಶೀಯ ಕರೆಗಳಿಗೆ ಮಾತ್ರ ಸಿಮ್ ಕಾರ್ಡ್ ನೋಂದಣಿ (ಕೆವೈಸಿ) ಸಮಯದಲ್ಲಿ ಟೆಲಿಕಾಂ ಕಂಪನಿಗಳಿಗೆ ನೀಡಿರುವ ಅಧಿಕೃತ ದಾಖಲೆಯ ಹೆಸರನ್ನು ಪ್ರದರ್ಶಿಸಲಾಗುತ್ತದೆ. ಅದೇ ರೀತಿ ವಿದೇಶಗಳಿಂದ ಬರುವ ಕರೆಗಳಿಗೆ ಯಾವುದೇ ವ್ಯಕ್ತಿಯ ಹೆಸರು ಕಾಣಿಸುವುದಿಲ್ಲ, ಬದಲಿಗೆ ಕೇವಲ ‘ಇಂಟರ್ನ್ಯಾಷನಲ್ ಕಾಲ್’ (ಅಂತರರಾಷ್ಟ್ರೀಯ ಕರೆ) ಎಂಬ ವಿವರ ಮಾತ್ರ ಪ್ರದರ್ಶನಗೊಳ್ಳಲಿದೆ. ಆದರೆ, ‘ಕಾಲಿಂಗ್ ಲೈನ್ ಐಡೆಂಟಿಫಿಕೇಶನ್ ರಿಸ್ಟ್ರಿಕ್ಶನ್’ (CLIR) ಸೌಲಭ್ಯವನ್ನು ಆಯ್ಕೆ ಮಾಡಿಕೊಂಡಿರುವ ಬಳಕೆದಾರರ ಹೆಸರು ಪರದೆಯ ಮೇಲೆ ಗೋಚರಿಸುವುದಿಲ್ಲ.

4G ಮತ್ತು ಮೇಲ್ಪಟ್ಟ ನೆಟ್‌ವರ್ಕ್‌ಗಳಿಗೆ ಅನ್ವಯ

ಪ್ರಸ್ತುತ ಈ ಸೌಲಭ್ಯವನ್ನು ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಸಿರುವ 4G ಹಾಗೂ ಅದಕ್ಕಿಂತ ಮೇಲ್ಪಟ್ಟ ತಂತ್ರಜ್ಞಾನ ಆಧಾರಿತ ವಾಯರ್‌ಲೆಸ್ ನೆಟ್‌ವರ್ಕ್‌ಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2G, 3G ಮತ್ತು ಲ್ಯಾಂಡ್‌ಲೈನ್ ನೆಟ್‌ವರ್ಕ್‌ಗಳಿಗೆ ಈ ನಿಯಮವನ್ನು ವಿಸ್ತರಿಸುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಿ ಪ್ರತ್ಯೇಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿಯೊಂದು ಟೆಲಿಕಾಂ ಸಂಸ್ಥೆಯು ಹೆಸರು ಮತ್ತು ಸಂಖ್ಯೆಗಳನ್ನು ಹೊಂದಿರುವ ದತ್ತಾಂಶವನ್ನು ನಿರ್ವಹಿಸಲಿದ್ದು, ಕರೆ ಬಂದ ಕ್ಷಣದಲ್ಲಿ ಮಾತ್ರ ಈ ಮಾಹಿತಿ ಪರಿಶೀಲನೆಯಾಗುತ್ತದೆ. ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಕರೆ ಮುಗಿದ ನಂತರ ಈ ಹೆಸರು ವ್ಯವಸ್ಥೆಯಲ್ಲಿ ಸಂಗ್ರಹವಾಗಿ ಉಳಿಯದಂತೆ ‘ಸೆಕ್ಯುರಿಟಿ-ಬೈ-ಡಿಸೈನ್’ ಮಾದರಿಯನ್ನು ರೂಪಿಸಲಾಗಿದೆ.

ವಾಣಿಜ್ಯ ಸಂಪರ್ಕಗಳಿಗೆ ವಿಶೇಷ ವಿನಾಯಿತಿ

ವ್ಯಾಪಾರ ಮತ್ತು ಸಗಟು (ಬಲ್ಕ್) ಸಂಪರ್ಕ ಹೊಂದಿರುವ ಗ್ರಾಹಕರಿಗೆ ತಮ್ಮ ಅಧಿಕೃತ ದಾಖಲೆಯ ಹೆಸರಿನ ಬದಲು ‘ಆದ್ಯತೆಯ ಹೆಸರು’ ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ಆದರೆ, ಈ ಹೆಸರು ಅಧಿಕೃತ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಅಥವಾ ಜಿಎಸ್‌ಟಿ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟ ವ್ಯಾಪಾರ ಹೆಸರಾಗಿರಬೇಕು. ಟೆಲಿಕಾಂ ಕಂಪನಿಗಳು ಮೂಲ ದಾಖಲೆಗಳೊಂದಿಗೆ ಈ ವಿವರಗಳನ್ನು ಪರಿಶೀಲಿಸಿದ ನಂತರವೇ ಆ ಹೆಸರನ್ನು ಪ್ರದರ್ಶಿಸಲು ಅನುಮತಿ ನೀಡಲಿವೆ. ಇದರೊಂದಿಗೆ, ಹೆಸರು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ತೊಂದರೆಗಳಾದಲ್ಲಿ ಕಾಲಮಿತಿಯೊಳಗೆ ಪರಿಹರಿಸಲು ಪ್ರತ್ಯೇಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ರೂಪಿಸುವಂತೆಯೂ ಆಪರೇಟರ್‌ಗಳಿಗೆ ಆದೇಶಿಸಲಾಗಿದೆ.

Join WhatsApp

Join Now

Join Telegram

Join Now