ಸುದ್ದಿಒನ್, ಹಿರಿಯೂರು, ಅಕ್ಟೋಬರ್. 15 : ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗೆ ಪಡೆಯದೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಕಟ್ಟದೆ, ಕಳ್ಳತನದಿಂದ ಅಕ್ರಮವಾಗಿ ಮಣ್ಣನ್ನು ಹಿಟಾಚಿ ವಾಹನದ ಮೂಲಕ ಟಿಪ್ಪರ್ ಲಾರಿಗಳಿಗೆ ತುಂಬಿ ಲಾಭಕ್ಕಾಗಿ ಮಾರಾಟ ಮಾಡಲು ಬೇರೆ ಕಡೆಗೆ ಸಾಗಿಸುತ್ತಿದ್ದ ಸ್ಥಳದ ಮೇಲೆ ಅಧಿಕಾರಿಗಳ ತಂಡ ಬುಧವಾರ ದಿಢೀರ್ ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿದೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕುಶಾಲ್ ಚೌಕ್ಸಿ (ಐಪಿಎಸ್) ರವರ ಸೂಚನೆಯಂತೆ ಹಾಗೂ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಎನ್. ಗೋಪಾಲಕೃಷ್ಣ ರವರ ಮಾರ್ಗದರ್ಶನದಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ಹಿರಿಯೂರು ನಗರ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಿರಾಜ್ ಮತ್ತು ಪಿಎಸ್ಐ ಮಹೇಶ್ ಗೌಡ ಅವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ ವೆಂಕಟೇಶ್, ಹನೀಫ್ ಹಡಗಲಿ, ಸಿದ್ದಪ್ಪ, ನವೀನ್ ಕುಮಾರ್, ಜಾಫರ್ ಸಾಧಿಕ್ ಹಾಗೂ ಶ್ರೀಧರ್ ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿಕೊಂಡು ಈ ದಾಳಿ ನಡೆಸಲಾಯಿತು.
ದಾಳಿಯ ಸಂದರ್ಭದಲ್ಲಿ ಅಕ್ರಮವಾಗಿ ಮಣ್ಣು ಸಾಗಿಸಲು ಬಳಸಲಾಗುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನಗಳ ಚಾಲಕರು ಮತ್ತು ಮಾಲೀಕರ ವಿರುದ್ಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ. ಅಕ್ರಮ ಚಟುವಟಿಕೆಯನ್ನು ಪತ್ತೆಹಚ್ಚಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.











