ಬೆಂಗಳೂರು.ಜುಲೈ.19: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ವಿಧಿವಶರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯು ಸೋಮವಾರದಂದು ಹಾಸನ ಜಿಲ್ಲೆಯ ಹರದನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದ್ದು, ಈ ಕುರಿತು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಹಾಸನ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೆಚ್.ಡಿ. ದೇವೇಗೌಡರ ಕಾಲಿಗೆ ನಮಸ್ಕರಿಸಿದ ಸಿಎಂ, ಅವರ ಕೈಹಿಡಿದು ಪಕ್ಕದಲ್ಲೇ ಕುಳಿತು ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಚೆನ್ನಮ್ಮ ಅವರು ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ತ್ಯಾಗದ ಸ್ವರೂಪಿಯಾಗಿ ಮಾದರಿಯಾಗಿದ್ದರು. ಮಾಜಿ ಪ್ರಧಾನಿಯವರ ಪತ್ನಿಯಾಗಿ, ಕೇಂದ್ರ ಸಚಿವರ ತಾಯಿಯಾಗಿ ರಾಜಕೀಯ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಿದ ಮಹಿಳೆ ಎಂದು ಕಂಬನಿ ಮಿಡಿದರು.
ಮಾತೃ ಸ್ವರೂಪಿಗೆ ಭಾವಪೂರ್ಣ ನಮನ
ಇದನ್ನು ಓದಿಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್. ಪೊನ್ನಣ್ಣ ನೇಮಕ: ಸಂಪುಟ ದರ್ಜೆ ಸ್ಥಾನಮಾನಇಂದು ಕುಟುಂಬಸ್ಥರೊಂದಿಗೆ ತೆರಳಿ ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ.
ಶ್ರೀಮತಿ ಚೆನ್ನಮ್ಮ ಅವರ ನಿಧನ ಆಘಾತ ತಂದಿದೆ. ಅವರು ಅಪಾರ ದೈವಭಕ್ತೆ. ಕಷ್ಟ-ಸುಖದಲ್ಲಿ… pic.twitter.com/22MCfvJf4X
— DK Shivakumar (@DKShivakumar) July 18, 2026
ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ
ಮೃತರ ಅಂತಿಮ ದರ್ಶನಕ್ಕೆ ಪದ್ಮನಾಭನಗರದ ನಿವಾಸದಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇಂದು ಮುಂಜಾನೆ 7 ಗಂಟೆಯಿಂದ 9 ಗಂಟೆಯವರೆಗೆ ದೇವೇಗೌಡರ ಕುಟುಂಬಸ್ಥರಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಲಿವೆ. ಸಾರ್ವಜನಿಕರು ಹಾಗೂ ಗಣ್ಯರ ದರ್ಶನಕ್ಕಾಗಿ ದೇವೇಗೌಡರ ಮನೆಯ ಸಮೀಪವಿರುವ ಮೈದಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 11:30ರ ವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹಾಸನಕ್ಕೆ ಪಾರ್ಥಿವ ಶರೀರ ರವಾನೆ
ಬೆಂಗಳೂರಿನಲ್ಲಿ ಅಂತಿಮ ದರ್ಶನದ ಪ್ರಕ್ರಿಯೆ ಮುಗಿದ ಬಳಿಕ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಹಾಸನಕ್ಕೆ ಸ್ಥಳಾಂತರಿಸಲಾಗುವುದು. ಸೋಮವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಬಳಿ ಇರುವ ಮಾವಿನಕೆರೆ ಜಮೀನಿನಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.











