ಚಿತ್ರದುರ್ಗ, ಜುಲೈ. 20: ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು, ವಕೀಲರು ನಿರಂತರ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಇಂತಹ ಒತ್ತಡದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಡಿ.ಮಹಾವರ್ಕರ್ ಅಭಿಪ್ರಾಯಪಟ್ಟರು.
ನಗರದ ವಕೀಲರ ಭವನದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಾಸ್ಥ್ಯ ಹೆಲ್ತ್ ಇವರ ಜಂಟಿ ಆಶ್ರಯದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಂಗ ಇಲಾಖೆಯ ನೌಕರರಿಗಾಗಿ ಆಯೋಜಿಸಲಾಗಿದ್ದ ‘ಉಚಿತ ಆರೋಗ್ಯ ತಪಾಸಣೆ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.
‘ಎ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ’ ಎಂಬ ಮಾತಿದೆ. ನಮ್ಮ ಮನಸ್ಸು ಪ್ರಫುಲ್ಲವಾಗಿರಬೇಕಾದರೆ ಮೊದಲು ನಮ್ಮ ದೇಹ ಆರೋಗ್ಯವಾಗಿರಬೇಕು. ದೇಹ ಸದೃಢವಾಗಿಲ್ಲದಿದ್ದರೆ ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಸಂಘವು ತನ್ನ ಸದಸ್ಯರು ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಸಿಬ್ಬಂದಿ ಹಾಗೂ ವಕೀಲರು ಈ ಶಿಬಿರದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಣ್ಣಿನ ತಜ್ಞರಾದ ಡಾ. ಮೃತ್ಯುಂಜಯ ಮಾತನಾಡಿ, ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಣ್ಣಿನ ಸಮಗ್ರ ತಪಾಸಣೆಗೆ ಒಳಪಡುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಮನುಷ್ಯನ ದೇಹದಲ್ಲಿ ರಕ್ತದೊತ್ತಡ ಇರುವಂತೆಯೇ ಕಣ್ಣಿನಲ್ಲೂ ನಿರ್ದಿಷ್ಟ ಒತ್ತಡವಿರುತ್ತದೆ. ಇದನ್ನು ‘ಇಂಟ್ರಾ ಅಕ್ಯುಲರ್ ಪ್ರೆಶರ್’ ಎಂದು ಕರೆಯಲಾಗುತ್ತದೆ. ಕಣ್ಣಿನಲ್ಲಿ ಈ ಒತ್ತಡ ಹೆಚ್ಚಾದಾಗ, ಕಣ್ಣಿನ ಒಳಗಿನ ದ್ರವದ ಸಮತೋಲನ ತಪ್ಪುತ್ತದೆ. ಇದರ ಪರಿಣಾಮವಾಗಿ ಕಣ್ಣಿನ ನರಗಳು ಹಾನಿಗೊಳಗಾಗಿ ‘ಗ್ಲುಕೋಮಾ’ ಅಂದರೆ ಕಣ್ಣಿನ ಒತ್ತಡದ ಕಾಯಿಲೆ ಆವರಿಸುವ ಸಾಧ್ಯತೆ ಇರುತ್ತದೆ. ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸುವುದರಿಂದ ಇದನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಹೆಚ್ಚಾಗುತ್ತಿದ್ದು, ಇದು ಕೂಡ ಕಣ್ಣಿನ ನರಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಕಣ್ಣಿನ ನರಗಳಲ್ಲಿ ರಕ್ತ ಸೋರಿಕೆಯಾಗಿ ‘ಡಯಾಬಿಟಿಕ್ ರೆಟಿನೋಪತಿ’ ಮತ್ತು ರೆಟಿನಾಲ್ ಡಿಟ್ಯಾಚ್‍ಮೆಂಟ್ ನಂತಹ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಇದರೊಂದಿಗೆ ಮೊಬೈಲ್ ಹಾಗೂ ಕಂಪ್ಯೂಟರ್‍ಗಳ ಅತಿಯಾದ ಬಳಕೆಯಿಂದ ಕಣ್ಣುಗಳು ಒಣಗುವ ಡ್ರೈ ಐಸ್ ಅಥವಾ ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸಣ್ಣ ಮಕ್ಕಳಿಗೂ ಸಹ ಮೈನಸ್ ಸಂಖ್ಯೆಯ ಕನ್ನಡಕಗಳು ಅನಿವಾರ್ಯವಾಗುತ್ತಿವೆ. ಸೂಕ್ತ ಸಮಯದಲ್ಲಿ ಪರೀಕ್ಷಿಸಿ ಕನ್ನಡಕ ಬಳಸುವುದರಿಂದ ಕಣ್ಣಿನ ದೃಷ್ಟಿ ದೋಷಗಳನ್ನು ನಿವಾರಿಸಬಹುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಮಹೇಶ್ವರಪ್ಪ ಮಾತನಾಡಿ, ನಮ್ಮ ಬಳಿ ಎಷ್ಟೇ ಸಂಪತ್ತು, ಕಾರು, ಬಂಗಲೆಗಳಿದ್ದರೂ ಸಹ ಆರೋಗ್ಯ ಸರಿ ಇಲ್ಲದಿದ್ದರೆ ಯಾವುದನ್ನೂ ಅನುಭವಿಸಲು ಸಾಧ್ಯವಿಲ್ಲ. ಹಾಗಾಗಿ ‘ಆರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಮೊದಲು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದರು.
ಇಂದಿನ ಧಾವಂತದ ಬದುಕಿನಲ್ಲಿ ನಾವು ವರ್ಷಕ್ಕೆ ಕನಿಷ್ಟ ಮೂರರಿಂದ ನಾಲ್ಕು ಬಾರಿಯಾದರೂ ಬಿಪಿ, ಶುಗರ್ ಸೇರಿದಂತೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು. ಈ ರೀತಿ ಮುನ್ನೆಚ್ಚರಿಕೆ ವಹಿಸಿದರೆ ಪದೇ ಪದೇ ಆಸ್ಪತ್ರೆಗೆ ಅಲೆದಾಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬರುವುದಿಲ್ಲ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಣ್ಣ ಸೋಮಶೇಖರ್, ಗಂಗಾಧರ್ ಚನ್ನಬಸಪ್ಪ ಹಡಪದ್, ಡಿ.ಮಮತಾ, ಎಸ್.ಶಕುಂತಲಾ, ಆರ್.ನಟೇಶ್, ರಶ್ಮಿ ಎಸ್ ಮರಡಿ, ಕೆ.ಜಿ.ಸತೀಶ್, ಪೂಜಾ ಬೆಳಕೇರಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಓ.ಜಗದೀಶ್ ಗುಂಡೇರಿ, ಉಪಾಧ್ಯಕ್ಷೆ ಸಾವಿತ್ರಮ್ಮ, ಖಜಾಂಚಿ ಸೋಮಶೇಖರ್ ಸೇರಿದಂತೆ ನ್ಯಾಯಾಂಗದ ಇಲಾಖೆ ಸಿಬ್ಬಂದಿ, ವಕೀಲರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












