ಚಿತ್ರದುರ್ಗ ಫೆ. 11 : ಜಲಸಂಪನ್ಮೂಲ ಇಲಾಖೆಯಿಂದ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಮತ್ತು ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ 0.307 ಟಿ.ಎಂ.ಸಿ. ನೀರು ಹಂಚಿಕೆ ಮಾಡಿ ಆದೇಶಿಸಿದ್ದು, ಈ ಕಾಮಗಾರಿಯನ್ನು ಕಾಲಮಿತಿಯಲ್ಲಿಯೇ ಜಾರಿಗೊಳಿಸಲು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಷ್ಕøತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಬೇಕು, ಮತ್ತು ಸದರಿ ಕಾಮಗಾರಿಗೆ ಪ್ರಸ್ತುತ ಸಾಲಿನಯೇ ಅನುದಾನ ನಿಗದಿಗೊಳಿಸಿ ಅನುಮೋದನೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಎನ್.ಎಸ್. ಭೋಸರಾಜ್ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕಾಮಗಾರಿ ಅನುಷ್ಠಾನದಿಂದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಾದ ಉಡುವಳ್ಳಿ ಗೌಡನಹಳ್ಳಿ ಗಾಂಧಿನಗರ ಚಿಕ್ಕಕೆರೆ, ಗಾಂಧಿನಗರ ಕೆರೆ, ಬಗ್ಗನಡು, ವಡ್ಡನಹಳ್ಳಿ ಕೆರೆ, ಮಾವಿನಮಡು, .ದಿಂಡಾವರ, ಮಾಳಗೊಂಡನಹಳ್ಳಿ, ವೀರವ್ವನಾಗತೀಹಳ್ಳಿ, ಪಿಲಾಲಿ, ಜವನಗೊಂಡನಹಳ್ಳಿ, ಕಾಟನಾಯಕನಹಳ್ಳಿ, ಅರಶಿಣಗುಂಡಿ, ಉಳಿವಿನಹಾಳ್, ಯಲ್ಲದಕೆರೆ ಕೆರೆಗಳು ಹಾಗೂ ಗಾಯತ್ರಿ ಜಲಾಶಯ ವ್ಯಾಪ್ತಿಯ ಸುಮಾರು 06 ಗ್ರಾಮ ಪಂಚಾಯತಿಗಳಡಿ ಬರುವ 100 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಮತ್ತು ಅಂತರ್ಜಲ ವೃದ್ದಿ ಪಡಿಸಬಹುದಾಗಿರುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಶಯ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ಭಾಗವಾದ ಜವನಗೊಂಡನಹಳ್ಳಿ ಹೋಬಳಿಯ 06 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 100 ಜನವಸತಿ ಪ್ರದೇಶಗಳಲ್ಲಿ ಮಳೆಯ ಅಭಾವದಿಂದಾಗಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಮತ್ತು ಅಂತರ್ಜಲ ಕುಸಿತವಾಗಿದೆ. ಹೀಗಾಗಿ ಈ ಭಾಗದ ಗ್ರಾಮಗಳಿಗೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಜವನಗೊಂಡಹಳ್ಳಿ ಹೋಬಳಿಯ 16 ಕೆರೆಗಳು ಮತ್ತು ಗಾಯತ್ರಿ ಜಲಾಶಯಕ್ಕೆ ಕುಡಿಯುವ ನೀರು ತುಂಬಿಸುವ ಯೋಜನೆಯ ಕಾಮಗಾರಿಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಲಾಗಿತ್ತು. ಈ ಕಾಮಗಾರಿ ಅನುಷ್ಠಾನಕ್ಕೆ ಬೇಕಾಗುವ ನೀರಿನ ಹಂಚಿಕೆ ಬಗ್ಗೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ “ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿರುವುದರಿಂದ ಈ ಯೋಜನೆಗೆ ಬೇಕಾಗುವ ನೀರಿನ ಹಂಚಿಕೆ ಮಾಡಬೇಕು” ಎಂದು ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಮತ್ತು ಯಾವುದಾದರೂ ಮೂಲದಿಂದ ಇದಕ್ಕೆ ನೀರು ಹಂಚಿಕೆ ಮಾಡಲೇಬೇಕು ಎಂದು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ 06 ತಿಂಗಳುಗಳಿಗೂ ಹೆಚ್ಚು ಕಾಲ ನಿರಂತರವಾಗಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಅಧಿಕಾರಿಗಳ ಸಭೆ ನಡೆಸಿ ಅಂತಿಮವಾಗಿ ಸಣ್ಣ ನೀರಾವರಿ ಇಲಾಖೆಯವರು ಈ ಯೋಜನೆಗೆ ಬೇಕಾಗುವ ನೀರಿನ ಪ್ರಮಾಣ 0.307 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿ, ಜಲಸಂಪನ್ಮೂಲ ಇಲಾಖೆಯಿಂದ 2026 ರ ಫೆಬ್ರವರಿ 02 ರಂದು ಸರ್ಕಾರದ ಆದೇಶ ಹೊರಡಿಸಲಾಗಿರುತ್ತದೆ.
ನೀರಿನ ಹಂಚಿಕೆಯ ಸರ್ಕಾರದ ಆದೇಶದೊಂದಿಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಕಳೆದ ಮಂಗಳವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಎನ್.ಎಸ್.ಭೋಸ್ರಾಜು ರವರನ್ನು ಭೇಟಿ ಮಾಡಿ, ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ಜವನಗೊಂಡನಹಳ್ಳಿ ಹೋಬಳಿಯಲ್ಲಿ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಈಗಾಗಲೆ ಸಂಪೂರ್ಣವಾಗಿ ಕುಸಿದಿದ್ದು, ಬರಗಾಲದ ಛಾಯೆ ಆವರಿಸಿದೆ. ಬೇಸಿಗೆ ಅವಧಿಯಲ್ಲಿ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು ತಾಲ್ಲೂಕು ಆಡಳಿತದಿಂದ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಯೋಜಿಸಲಾಗಿರುತ್ತದೆ. ಈ ಭಾಗದಲ್ಲಿನ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿದ್ದು ಅಂತರ್ಜಲಮಟ್ಟ ಸಂಪೂರ್ಣವಾಗಿ ಕುಸಿದು ಹೋಗಿರುವುದರಿಂದ, ಇರುವ ಅಲ್ಪಸ್ವಲ್ಪದ ಬೆಳೆಗಳಿಗೆ ನೀರು ಇಲ್ಲದೇ ರೈತರು ಸಂಕಷ್ಟ ಪರಿಸ್ಥಿತಿ ಎದುರುಸುತ್ತಿದ್ದಾರೆ. ಈ ಭಾಗದ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಪಡಿಸುವ ಸಮಸ್ಯೆ ತುರ್ತಾಗಿ ಬಗೆಹರಿಸುವ ಅನಿವಾರ್ಯತೆ ಇದೆ ಎಂಬುದಾಗಿ ಮನವರಿಕೆ ಮಾಡಿಕೊಡಲಾಗಿರುತ್ತದೆ. ಅಲ್ಲದೆ ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳು ಮತ್ತು ಗಾಯತ್ರಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ 0.307 ಟಿ.ಎಂ.ಸಿ. ನೀರು ಹಂಚಿಕೆ ಮಾಡಿ ಈಗಾಗಲೆ ಸರ್ಕಾರ ಆದೇಶ ಹೊರಡಿಸಿದ್ದು, ಈ ಕಾಮಗಾರಿಯನ್ನು ಕಾಲಮಿತಿಯಲ್ಲಿಯೇ ಜಾರಿಗೊಳಿಸಲು ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಷ್ಕøತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಬೇಕು, ಮತ್ತು ಸದರಿ ಕಾಮಗಾರಿಗೆ ಪ್ರಸ್ತುತ ಸಾಲಿನಲ್ಲಿಯ ಅನುದಾನದಲ್ಲಿಯೇ ಅನುದಾನ ನಿಗದಿಗೊಳಿಸಿ ಅನುಮೋದನೆ ನೀಡುವಂತೆ ಸಚಿವರಲ್ಲಿ ಮನವಿ ಮಾಡಿರುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಮನವಿಗೆ ಸ್ಪಂದಿಸಿರುವ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಎನ್.ಎಸ್. ಭೋಸರಾಜ್ ಅವರು, ಯೋಜನೆ ಕುರಿತಂತೆ ಡಿಪಿಆರ್ ತಯಾರಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


