ಬೆಂಗಳೂರು: ಕೋಮುದ್ವೇಷ ಬಿತ್ತುವ ಆರೋಪದ ಮೇಲೆ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ವಿರುದ್ಧ ದೂರು ದಾಖಲಾಗಿದೆ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಅಧ್ಯಕ್ಷ ಮುಹಮ್ಮದ್ ಜುನೈದ್ ಪಿ.ಕೆ.ನೇತೃತ್ವದ ನಿಯೋಗ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ, ಕೋಮು ದ್ವೇಷ ಹರಡುತ್ತಿರುವ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆ ಮನೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಕೆ ಮಾಡಿದರು.
2023-24ನೆ ಸಾಲಿನ ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿಯನ್ನು ಇಟ್ಟುಕೊಂಡು ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ನಿರ್ದೇಶನದಂತೆ ರಾಜ್ಯ ಶಿಕ್ಷಣ ಇಲಾಖೆ ಬೆಳಗ್ಗೆ ಶುಕ್ರವಾರದಂದು ಸಮಯ ಬದಲಾಯಿಸಿ ನಮಾಜ್ ಮಾಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಉಲ್ಲೇಖಿಸಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಮುಹಮ್ಮದ್ ಜುನೈದ್ ಪಿ.ಕೆ ಆರೋಪಿಸಿದ್ದಾರೆ.
SSLC Exam: ಪರೀಕ್ಷೆಯಲ್ಲೂ ಮುಸ್ಲಿಮರ ಓಲೈಕೆ; ನಮಾಜ್‌ಗಾಗಿ ಸಮಯವೇ ಬದಲು! ಎಂದು ಸುದ್ದಿಯನ್ನೂ ಪ್ರಕಟಿಸಿದೆ. ಇದೇ ಸುದ್ದಿಯನ್ನು ಬಿಜೆಪಿ ಐಟಿ ಸೆಲ್ ರೀಟ್ವೀಟ್ ಮಾಡಿಕೊಂಡು, “ಪರೀಕ್ಷೆಯ ವಿಚಾರದಲ್ಲೂ ಒಂದು ಸಮುದಾಯಕ್ಕೆ ಇಷ್ಟೊಂದು ಓಲೈಕೆ ಮಾಡುವ ಕಾಂಗ್ರೆಸ್, ಹಿಂದೂ ವಿದ್ಯಾರ್ಥಿಗಳನ್ನು ಈಗ ಎರಡನೇ ದರ್ಜೆಗೆ ಇಳಿಸಿದೆ” ಎಂದು ಆರೋಪಿಸಿದೆ. ಈ ಸಂಬಂಧ ದೂರು ದಾಖಲಾಗಿದೆ.