ಸುದ್ದಿಒನ್, ಹಿರಿಯೂರು, ಫೆಬ್ರವರಿ.06 : ಫಸಲ್ ಭೀಮಾ ಯೋಜನೆ ಕುರಿತು ಸಭೆಗೆ ಇನ್ಸೂರೆನ್ಸ್ ಕಂಪನಿಯವರು ಯಾವುದೇ ಮಾಹಿತಿ,ದಾಖಲೆ ತರದೇ ಬಂದಿದ್ದರಿಂದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ರೈತರು ಹಾಗೂ ಬೆಳೆ ವಿಮೆ ಅಧಿಕಾರಿಗಳ ಸಭೆ ಸಭೆ ನಡೆಸಲಾಯಿತು.
ಮಾಹಿತಿ ಕೊರತೆಯಿಂದ ಅಧಿಕಾರಿಗಳು ಸಭೆಗೆ ಬಂದಿದ್ದರಿಂದ ಸಭೆಯನ್ನು ಮುಂದೂಡಲಾಯಿತು.
ಈ ಕುರಿತು ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು ವಿಮೆ ಅಧಿಕಾರಿಗಳು ಸಭೆಗಳಿಗೆ ಖಾಲಿ ಕೈಬೀಸಿಕೊಂಡು ಬಂದು ಬಿಡುತ್ತಾರೆ. ಅಲ್ಲದೆ ಕೇವಲ ನಾಲ್ಕು ಬೆಳೆಗಳಿಗೆ ಮಾತ್ರ ದಾಖಲೆಗಳನ್ನು ಸಲ್ಲಿಸಿ ಉಳಿದ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಸೇರಿಸಿಯೇ ಇಲ್ಲ. ಉದಾಹರಣೆಗೆ ಸೂರ್ಯಕಾಂತಿ ಬೆಳೆಯ ಇನ್ಸೂರೆನ್ಸ್ ಕಟ್ಟಿಸಿಕೊಂಡು ಬಿತ್ತನೆ ಆಗದ ಪಕ್ಷದಲ್ಲಿ ಅದಕ್ಕೆ ಕೊಡಬೇಕಾದ ಪರಿಹಾರವನ್ನು ಕೊಡದೆ ಕೈ ಬಿಡಲಾಗುತ್ತದೆ. ಲೆಕ್ಕಪತ್ರದ ಶಾಖೆಯವರು ಸಹ ದಾಖಲೆಗಳನ್ನು ತರದೆ ಸರ್ಕಾರಕ್ಕೆ ಕೊಡುವ ಮಾಹಿತಿ ಎಮ್ ಎಸ್ ಬಿಲ್ಡಿಂಗ್ ನಿಂದ ಬರುತ್ತದೆ ಎಂಬ ಸಬೂಬು ಹೇಳುತ್ತಾರೆ. ಇವರು ಕೊಡುವ ಮಾಹಿತಿ ಜಿಲ್ಲಾಧಿಕಾರಿಗಳಿಗೆ ಹೋಗುತ್ತದೆ.
ಅಲ್ಲಿಂದ ಎಂ ಎಸ್ ಬಿಲ್ಡಿಂಗ್ ಹೋಗುತ್ತದೆ. ಆದರೆ ಇವರು ದಾಖಲೆಯೇ ಮೇಲಿನಿಂದ ಮಳೆ ಬಂದ ರೀತಿಯಲ್ಲಿ ಬರುತ್ತದೆ ಎಂದು ಹಸಿ ಸುಳ್ಳು ಹೇಳುತ್ತಾರೆ. ಕಂಪನಿಯವರು ರೈತರನ್ನು ಸಂಪರ್ಕಿಸದೆ ಸುಳ್ಳು ಸುಳ್ಳು ಮಾಹಿತಿಗಳನ್ನು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಸಲ್ಲಿಸುತ್ತಾರೆ. ಮ್ಯಾಕ್ಲೂರಹಳ್ಳಿ ಭಾಗದಲ್ಲಿ 28 ಎಕರೆ ಹತ್ತಿ ಬಿತ್ತನೆಯಾಗಿದೆ, ಕಸಬಾ ಹೋಬಳಿಯಲ್ಲಿ ಶೇ 26 ರಷ್ಟು ಸೂರ್ಯಕಾಂತಿ ಬಿತ್ತನೆಯಾಗಿದೆ ಎಂದು ವರದಿ ಕೊಟ್ಟಿದ್ದಾರೆ. ವಾಸ್ತವವಾಗಿ ಸೂರ್ಯಕಾಂತಿ,ಹತ್ತಿ ಬಿತ್ತನೆಯೇ ಆಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಎಚ್ಆರ್ ತಿಮ್ಮಯ್ಯ , ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ, ರೈತ ಮುಖಂಡರಾದ ಬಬ್ಬೂರು ಸುರೇಶ್, ಆಲೂರು ಸಿದ್ದರಾಮಣ್ಣ, ಕಸವನಹಳ್ಳಿ ರಮೇಶ್ , ಸಂತೋಷ್, ಕಾತ್ರಿಕೇನಹಳ್ಳಿ ಮಂಜುನಾಥ್ , ಕೆಸಿ ಹೊರಕೇರಪ್ಪ , ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ , ಕೆವಿಕೆ ಕುಮಾರಸ್ವಾಮಿ ಮುಂತಾದ ರೈತ ಮುಖಂಡರು ಹಾಜರಿದ್ದರು.