Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ಹೆಸರಾಗಲಿದೆ : ಬಿ.ಆನಂದ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 09 : ಕೈಗಾರಿಕಾ ಕ್ಷೇತ್ರದಲ್ಲಿ ಜಿಲ್ಲೆಯ ಮಹತ್ತರ ಹೆಜ್ಜೆ ಇಡುತ್ತಿದ್ದು, ಇನ್ನೂ ಕೆಲ ವರ್ಷಗಳಲ್ಲೇ ವಿಶ್ವದ ಭೂಪಟದಲ್ಲಿ ಜಿಲ್ಲೆ ಹೆಸರಾಗಲಿದೆ. ಇಡೀ ಜಗತ್ತು ಕೋಟೆನಾಡನ್ನು ತಿರುಗಿ ನೋಡಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ ಹೇಳಿದರು.

ನಗರದ ಹೋಟೆಲ್ ಐಶ್ವರ್ಯ ನವೀನ್ ಸಭಾಂಗಣದಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಎಂಎಸ್‌ಎಂಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್‌ಎಎಂಪಿ) ಯೋಜನೆಯಡಿ ಆಯೋಜಿಸಿದ್ದ ರಫ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈಗಾರಿಕೆಯಲ್ಲಿ ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ನಗರ ಹೊರತುಪಡಿಸಿ ಜಿಲ್ಲೆಯ ಬೇರೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಎಲ್ಲಿಯೂ ಕೈಗಾರಿಕೆ ಪ್ರದೇಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿ, ಹಿರಿಯೂರಿನ ಮೇಟಿಕುರ್ಕೆ ಬಳಿ ಕೈಗಾರಿಕೆ ಪ್ರದೇಶ ನಿರ್ಮಾಣ ಮಾಡಲಾಯಿತು. ಇದೀಗ ಈ ಪ್ರದೇಶ ಉದ್ಯಮಿಗಳ ನೆಚ್ಚಿನ ತಾಣವಾಗಿದೆ ಎಂದರು.

ಈಗಾಗಲೇ ಗಲ್ಫ್ ರಾಷ್ಟçಗಳು ಚಿತ್ರದುರ್ಗದತ್ತ ಮುಖಮಾಡಿವೆ. ದೇಶದ ಪ್ರತಿ ಮೂಲೆಯಿಂದ ಉದ್ಯಮಿಗಳು ಮೇಟಿಕುರ್ಕೆ ಬಳಿ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದರು.

 

ಬೃಹತ್ ಕೈಗಾರಿಕೆಗಳು ಆಗಮಿಸಿದ ಪರಿಣಾಮವಾಗಿ ಜಿಲ್ಲೆಯ ಸಣ್ಣಪುಟ್ಟ ಕೈಗಾರಿಕೆಗಳಿಗೂ ಅನುಕೂಲವಾಗಿದೆ. ನೂತನ ಕೈಗಾರಿಕೆ ನೀತಿಯಲ್ಲಿ ಬಿಯ್ಯಾಂಡ್ ಬೆಂಗಳೂರಿಗೆ ಆದ್ಯತೆ ನೀಡಲಾಗಿದೆ. ಚಿತ್ರದುರ್ಗಕ್ಕೆ ಹೆದ್ದಾರಿಗಳು ವರದಾನವಾಗಿದ್ದು, ಭದ್ರ ನೀರು ಬರುತ್ತಿರುವ ಕಾರಣ ಮತ್ತಷ್ಟು ನೆರವಾಗಲಿದೆ ಎಂದು ತಿಳಿಸಿದರು.

 

ಕೆಎಸ್‌ಎಫ್‌ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಆರ್.ಬಾಬು ಮಾತನಾಡಿ, ಯುವ ಉದ್ಯಮಿಗಳ ಕನಸು ನನಸಾಗಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಸದಾ ಬೆಂಬಲವಾಗಿ ನಿಲ್ಲಲಿದೆ. ಕ್ಷೇತ್ರದಲ್ಲಿ ಅನುಭವವಿಲ್ಲದಿದ್ದರೂ ಸಹ ಸಾಲ ಮತ್ತು ತಾಂತ್ರಿಕ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದರು.
ಉದ್ಯಮ ಪ್ರಾರಂಭಿಸಲು ಇಚ್ಛಾಶಕ್ತಿ ಇರಬೇಕು. ಸೋಲು, ಗೆಲುವನ್ನು ಸ್ವೀಕರಿಸುವ ಮನಸ್ಸು ನಿಮ್ಮದಾಗಬೇಕು. ಆಗ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಯಾವುದೇ ಉದ್ಯಮವನ್ನು ಪ್ರಾರಂಭಿಸುವ ಮೊದಲು ಜಿಲ್ಲಾ ಕೈಗಾರಿಕಾ ಕೇಂದ್ರದಿAದ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯುವುದು ಮುಖ್ಯ. ಪ್ರಸ್ತುತ ಮಾರುಕಟ್ಟೆ ಮತ್ತು ಹಣಕಾಸಿನ ಸವಾಲು ಹೆಚ್ಚಾಗಿವೆ. ಆದ್ದರಿಂದ ಸರಿಯಾದ ಯೋಜನೆಯೊಂದಿಗೆ ಉದ್ಯಮ ಆರಂಭಿಸುವುದು ಉತ್ತಮ ಎಂದು ಸಲಹೆ ನೀಡಿದರು.

ಈ ಹಿಂದೆ ಜವಳಿ ಇಲಾಖೆಯಿಂದ ಕೈಗಾರಿಕೆ ಸ್ಥಾಪನೆಗೆ 90% ಸಬ್ಸಿಡಿ ನೀಡಲಾಗುತ್ತಿತ್ತು, ಆದರೆ ಈಗ ಅದನ್ನು 75% ಕ್ಕೆ ಇಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮಾತ್ರ ಈ 75% ಸಬ್ಸಿಡಿ ಅನ್ವಯಿಸುತ್ತದೆ. ಈ ಯೋಜನೆಯಡಿ 15% ಬ್ಯಾಂಕ್ ಸಾಲ ಮತ್ತು 10% ಉದ್ಯಮಿಯ ಪಾಲು ಇರಬೇಕಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿAದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ 10 ಲಕ್ಷದಿಂದ 10 ಕೋಟಿ ರೂಪಾಯಿವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಅದು ಕೇವಲ 4% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಒಟ್ಟು 12% ಬಡ್ಡಿಯಲ್ಲಿ 8% ಅನ್ನು ಸರ್ಕಾರ ಭರಿಸುತ್ತದೆ ಎಂದು ವಿವರಿಸಿದರು.
ಹೋಟೆಲ್, ನರ್ಸಿಂಗ್ ಹೋಮ್ ಸೇರಿದಂತೆ ಇತ್ಯಾದಿ ಸೇವಾ ವಲಯದ ಚಟುವಟಿಕೆಗಳಿಗಾಗಿ ಮಹಿಳಾ ಉದ್ಯಮಿಗಳಿಗೆ 5 ಲಕ್ಷದಿಂದ 5 ಕೋಟಿ ರೂಪಾಯಿವರೆಗೆ 4% ಬಡ್ಡಿ ದರದಲ್ಲಿ ಸಾಲ ದೊರೆಯುತ್ತದೆ. ಸಾಮಾನ್ಯ ವರ್ಗದವರಿಗೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 5 ಲಕ್ಷದಿಂದ 5 ಕೋಟಿ ರೂಪಾಯಿವರೆಗೆ 5.5% ಬಡ್ಡಿ ಸಹಾಯಧನದೊಂದಿಗೆ ಸಾಲ ನೀಡಲಾಗುತ್ತದೆ ಎಂದು ತಿಳಿಸಿದರು.

ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ಮಾತನಾಡಿ, ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಯಮಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಯಾದಗಿರಿ ಮತ್ತು ರಾಯಚೂರಿನಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿವೆ ಎಂದರು.
ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದ ನಂತರ ಮೂರ್ನಾಲ್ಕು ಮಂದಿ ರಫ್ತು ವ್ಯವಹಾರಕ್ಕೆ ನೋಂದಣಿ ಮಾಡಿಕೊಂಡಿರುವುದು ಸಂತಸದ ವಿಷಯ. ಕೆಎಸ್‌ಎಫ್‌ಸಿ ಮೂಲಕ ಶೇ. 4 ರಷ್ಟು ಬಡ್ಡಿದರದಲ್ಲಿ ಸಾಲ ಮತ್ತು 10 ವರ್ಷಗಳ ಮರುಪಾವತಿ ಅವಧಿಯ ಬಗ್ಗೆ ಚರ್ಚಿಸಲಾಗಿದೆ ಎಂದರು.

ಸಾಮಾನ್ಯ ವರ್ಗದವರಿಗೆ 5 ಕೋಟಿ ರೂಪಾಯಿ ವರೆಗಿನ ಸಾಲಕ್ಕೆ ಕೇವಲ 5 ವರ್ಷಗಳ ಮರುಪಾವತಿ ಅವಧಿ ಇರುವುದನ್ನು ಉದ್ಯಮಿಗಳು ಟೀಕಿಸಿದ್ದಾರೆ. ಕೈಗಾರಿಕೆ ಸ್ಥಾಪಿಸಲು 2 ವರ್ಷ ಮತ್ತು ಉದ್ಯಮ ಆರಂಭಿಸಲು 2 ವರ್ಷ ಬೇಕಾಗುವುದರಿಂದ, ಮರುಪಾವತಿ ಅವಧಿಯನ್ನು 8 ರಿಂದ 10 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಪರಿಣಾಮ ಲಾಕ್‌ಡೌನ್ ಸಮಯದಲ್ಲಿ ಉದ್ಯಮಿಗಳು ಅನುಭವಿಸಿದ ಸಂಕಷ್ಟ ಮತ್ತು ಬ್ಯಾಂಕ್ ಸಾಲ ತೀರಿಸಲು ಪಟ್ಟ ಕಷ್ಟಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ. ಸಣ್ಣ ಕೈಗಾರಿಕೆಗಳು ಇಂಜಿನಿಯರ್‌ಗಳಿAದ ಹಿಡಿದು ಸಾಮಾನ್ಯ ಕಾರ್ಮಿಕರವರೆಗೆ ಎಲ್ಲರಿಗೂ ಕೆಲಸ ನೀಡುತ್ತವೆ. ದೇಶದ ಜಿಡಿಪಿ ಹೆಚ್ಚಿಸಲು ಪ್ರತಿಯೊಬ್ಬರೂ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಮತ್ತು ಇರುವವರು ರಫ್ತು ವ್ಯವಹಾರಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

 

ನಿವೃತ್ತ ಅಧಿಕಾರಿ ತಿಮ್ಮಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ರಾಘವೇಂದ್ರ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹುಸೇನ್, ಜಂಟಿ ಕಾರ್ಯದರ್ಶಿಗಳಾದ ಆರ್.ಕೇಶವ ಮೂರ್ತಿ, ವಿ.ದಿನೇಶ್ ಕುಮಾರ್, ಖಜಾಂಚಿ ಆರ್.ದುರೈ, ಪ್ಯಾನಲ್ ಅಧ್ಯಕ್ಷ ಬಿ.ಪ್ರವೀಣ್, ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಓ.ಮಹೇಶ್ವರಪ್ಪ ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now