ಸುದ್ದಿಒನ್, ಚಿತ್ರದುರ್ಗ, ಮೇ. 25 : “ಇವತ್ತಿನ ಆಧುನಿಕ ಸಮಾಜದಲ್ಲಿ ನಾವೆಲ್ಲರೂ ಸಾಕಷ್ಟು ಆತಂಕಗಳ ನಡುವೆ ಬದುಕುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯು ನಮಗೆ ಹೊಸ ಹೊಸ ಆವಿಷ್ಕಾರಗಳನ್ನು ನೀಡಿರುವುದು ನಿಜವಾದರೂ, ಅದರ ಜೊತೆಜೊತೆಯಲ್ಲೇ ಆಧುನಿಕತೆಯು ಹತ್ತು ಹಲವು ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ” ಎಂದು ಚಿತ್ರದುರ್ಗದ ಶ್ರೀ ಮುರುಘ ರಾಜೇಂದ್ರ ಬೃಹನ್ಮಠದ ಡಾ. ಬಸವ ಕುಮಾರ ಸ್ವಾಮೀಜಿಯವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ.
‘ಸುದ್ದಿಒನ್’ ಮಾಧ್ಯಮ ಸಂಸ್ಥೆಯು ಹಮ್ಮಿಕೊಂಡಿರುವ “ನೀರು ಉಳಿಸಿ ನೆಲದ ಋಣ ತೀರಿಸಿ” ವಿಶೇಷ ಅಭಿಯಾನಕ್ಕೆ ಸಂದರ್ಶನ ನೀಡಿ, ಮಾತನಾಡಿದ ಶ್ರೀಗಳು, ಮಾನವ ಸಂಬಂಧಗಳಲ್ಲಿ ಮೂಡಿರುವ ದೂರವಿರಬಹುದು ಅಥವಾ ಪ್ರಕೃತಿಯ ವಿನಾಶವಿರಬಹುದು—ಇವೆಲ್ಲವೂ ನಮ್ಮ ಕಣ್ಣಮುಂದಿರುವ ಕಠಿಣ ವಾಸ್ತವಗಳಾಗಿವೆ. ಪ್ರಕೃತಿಯಲ್ಲಿ ನಮಗೆ ಯಾವುದು ಉಚಿತವಾಗಿ ಸಿಗುತ್ತದೆಯೋ, ಅದನ್ನು ಅತ್ಯಂತ ಸ್ವೇಚ್ಛಾಚಾರವಾಗಿ ಮತ್ತು ಜವಾಬ್ದಾರಿಯಿಲ್ಲದೆ ಉಪಯೋಗಿಸುವ ಒಂದು ತಪ್ಪು ಮನೋಭಾವ ಇಂದು ಮಾನವನಲ್ಲಿ ಬೆಳೆದುಬಂದಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

ನೀರು ನಮ್ಮ ಪ್ರಾಣ; ಬೋರ್ವೆಲ್ ಸಂಸ್ಕೃತಿ ನಮ್ಮ ಅಪರಾಧ
ನಾವು ಮರೆಯಬಾರದು; ನೀರು ನಮ್ಮ ಪ್ರಾಣ, ನೀರು ನಮ್ಮ ಜೀವ. ನಮ್ಮ ಇಡೀ ದೇಹವನ್ನು ನಿರಂತರವಾಗಿ ಲವಲವಿಕೆಯಿಂದ ಇಡುವಂತಹ ಒಂದು ಅಮೂಲ್ಯ ಅಮೃತ ಎಂದರೆ ಅದು ನೀರು. ಅಂತಹ ಪವಿತ್ರ ನೀರಿನ ಬಗ್ಗೆ ಇವತ್ತಿನ ಸಮಾಜ ಅತ್ಯಂತ ತಾತ್ಸಾರ ಮನೋಭಾವವನ್ನು ಹೊಂದಿಕೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಇವತ್ತು ನಾವೆಲ್ಲರೂ ಬರೀ ಭೂಮಿಯಿಂದ ನೀರನ್ನು ಹೊರಗೆ ತೆಗೆಯುವ ಆಲೋಚನೆಗಳನ್ನು ಮಾತ್ರ ಮಾಡುತ್ತಿದ್ದೇವೆ. ಇದಕ್ಕಾಗಿ ಲಕ್ಷಾಂತರ ಬೋರ್ವೆಲ್ಗಳನ್ನು ಭೂಮಿಯ ಒಡಲಿಗೆ ಇಳಿಸುತ್ತಿದ್ದೇವೆ. ಆದರೆ, ಆ ನೀರನ್ನು ಇಂಗುಗುಂಡಿಗಳ ಮೂಲಕ ಮರುಪೂರಣ ಮಾಡಿ, ಭೂಮಿಯ ಅಂತರ್ಜಲವನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆಲೋಚನೆಗಳಿಂದ ನಾವು ತುಂಬಾ ದೂರ ಉಳಿದಿದ್ದೇವೆ. ಇದು ಮುಂದಿನ ಪೀಳಿಗೆಗೆ ನಾವು ಮಾಡುತ್ತಿರುವ ದೊಡ್ಡ ಅಪರಾಧವಾಗಿದೆ ಎಂದು ಸ್ವಾಮೀಜಿ ಎಚ್ಚರಿಸಿದರು.
https://youtu.be/KrqJUBkTKoI
ನಾಳೆ ಬರುವಂತಹ ನಮ್ಮ ಮಕ್ಕಳಿಗೆ, ಮುಂದಿನ ಜಗತ್ತಿನ ಭವಿಷ್ಯತ್ತಿನ ನಿರ್ಮಾಣಕ್ಕೆ ಮತ್ತು ಅವರಿಗೆ ಆಸರೆಯಾಗಲು ನೆರಳು, ನೀರು ಹಾಗೂ ಆಹಾರ ಸಿಗಬೇಕು ಎಂದರೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಇದಕ್ಕಾಗಿ ನಾವೇನು ಬಹಳ ದೊಡ್ಡ ಕೆಲಸಗಳನ್ನು ಮಾಡಬೇಕಾಗಿಲ್ಲ; ಸಣ್ಣ ಸಣ್ಣ ಪ್ರಯತ್ನಗಳು ಸಾಕು. ಯಾರ್ಯಾರ ಮನೆಗಳಲ್ಲಿ ಹೊಲಗಳಿವೆಯೋ, ಜಮೀನುಗಳಿವೆಯೋ ಆಯಾ ಜಮೀನುಗಳಲ್ಲಿ ತಕ್ಷಣವೇ ಒಂದು ಇಂಗುಗುಂಡಿಯನ್ನು ಮಾಡಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಯೋಗವನ ಬೆಟ್ಟದ ಯಶಸ್ವಿ ಜಲಪ್ರಯೋಗ: 10 ವರ್ಷಗಳ ವಾಸ್ತವ
ನಮ್ಮ ಯೋಗವನ ಬೆಟ್ಟದ ಸಂಸ್ಥಾಪಕರಾದಂತಹ ಪೂಜ್ಯ ಶ್ರೀ ಕಪರ್ದಿ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾವು ನೀರಿನ ಸಂರಕ್ಷಣೆಯ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದೇವೆ. ಚಿತ್ರದುರ್ಗ ಜಿಲ್ಲೆಯ ಕೊಳವೆಬಾವಿ ಸಂರಕ್ಷಣೆ ಮತ್ತು ನೀರು ಸಂರಕ್ಷಣೆ ತಜ್ಞರಾದ ಶ್ರೀ ದೇವರಾಜ್ ರೆಡ್ಡಿ ಅವರು ಈ ವಿಷಯದಲ್ಲಿ ಸಾಕಷ್ಟು ವೈಜ್ಞಾನಿಕವಾದಂತಹ ಅಧ್ಯಯನಗಳನ್ನು ನಡೆಸಿ, ದೊಡ್ಡ ಅಭಿಯಾನದ ಮೂಲಕ ದೇಶ ಹಾಗೂ ರಾಜ್ಯಾದ್ಯಂತ ಪ್ರಸಿದ್ಧರಾಗಿದ್ದಾರೆ. ಸುಮಾರು 10 ವರ್ಷಗಳ ಹಿಂದೆಯೇ ನಾವು ಶ್ರೀ ದೇವರಾಜ್ ರೆಡ್ಡಿ ಅವರನ್ನು ನಮ್ಮ ಯೋಗವನ ಬೆಟ್ಟಕ್ಕೆ ಕರೆಸಿ, ಇಲ್ಲಿರುವ ನಾಲ್ಕೂ ಬೋರ್ವೆಲ್ಗಳಿಗೂ ವೈಜ್ಞಾನಿಕವಾಗಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿಸಿದ್ದೆವು. ಅದನ್ನು ಇವತ್ತಿಗೂ ಯಾರು ಬೇಕಾದರೂ ಬಂದು ನೋಡಬಹುದು ಎಂದು ತಿಳಿಸಿದರು.
ಇದರ ವಾಸ್ತವ ಫಲಿತಾಂಶ ಏನೆಂದರೆ, ಕಳೆದ 10 ವರ್ಷಗಳಿಂದ ಸುತ್ತಮುತ್ತಲಿನ ಎಲ್ಲಾ ಜಮೀನುಗಳಲ್ಲಿ ನೀರಿನ ತೀವ್ರ ಅಭಾವ ಉಂಟಾಗಿ, ಭೀಕರ ಬರಗಾಲ ಬಂದಿದ್ದರೂ ಸಹ ನಮ್ಮ ಯೋಗವನ ಬೆಟ್ಟಕ್ಕೆ ಮಾತ್ರ ಯಾವುದೇ ನೀರಿನ ಬರ ಬಂದಿಲ್ಲ! ಇದಕ್ಕೆ ಕಾರಣ, ಬೆಟ್ಟದ ಮೇಲಿಂದ ಮತ್ತು ಸುತ್ತಮುತ್ತಲಿನ ಜಮೀನುಗಳಿಂದ ಹರಿದು ಬರುವ ಪ್ರತಿಯೊಂದು ಹನಿ ನೀರು ನೇರವಾಗಿ ಆ ನಾಲ್ಕು ಇಂಗುಗುಂಡಿಗಳ ಮೂಲಕ ನಮ್ಮ ಬೋರ್ವೆಲ್ಗಳಿಗೆ ಸೇರುತ್ತಿದೆ. ಮಳೆಗಾಲದಲ್ಲಂತೂ ಅಂತರ್ಜಲ ಮಟ್ಟ ಎಷ್ಟು ಹೆಚ್ಚಾಗುತ್ತದೆ ಎಂದರೆ, ನಾವು ಯಾವುದೇ ಮೋಟಾರ್ ಆನ್ ಮಾಡದಿದ್ದರೂ ಸಹ ಕೆಳಗಿರುವ ಒಂದೆರಡು ಬೋರ್ವೆಲ್ಗಳಿಂದ ನೀರು ತಾನಾಗಿಯೇ ಮೇಲಕ್ಕೆ ಉಕ್ಕುತ್ತದೆ. ಆ ಮಟ್ಟಿಗೆ ನಮಗೆ ನೀರು ಸಮೃದ್ಧಿಯಾಗಿದೆ ಎಂದು ಹೆಮ್ಮೆಯಿಂದ ಹಂಚಿಕೊಂಡರು. ಇದರ ಜೊತೆಗೆ, ನಮ್ಮ ಐದು ಎಕರೆ ಜಮೀನಿನಲ್ಲಿ ಮೊದಲಿನಿಂದಲೂ ಇದ್ದ ಗೋಕಟ್ಟೆಯನ್ನು ನಾವು ಮರುಪರಿಷ್ಕರಣೆ ಮಾಡಿ, ಅದಕ್ಕೊಂದು ಇಂಗುಗುಂಡಿ ವ್ಯವಸ್ಥೆ ಕಲ್ಪಿಸಿ ನೀರು ಸಂಗ್ರಹ ಮಾಡಿದ್ದೇವೆ. ಅಲ್ಲದೆ ಜಮೀನಿನಲ್ಲಿ ಚೆಕ್ ಡ್ಯಾಮ್ಗಳನ್ನು ಸಹ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ದೂರದರ್ಶಿತ್ವದ ಪ್ರಯೋಗಗಳು ಮತ್ತು ಕಾನ್ಸೆಪ್ಟ್ ನಮ್ಮ ಪೂಜ್ಯ ಕಪರ್ದಿ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿಯವರದ್ದಾಗಿದೆ. ಅವರು ಈ ಜಮೀನಿಗೆ ಬಂದ ಸಂದರ್ಭದಲ್ಲಿ ಈ ಎಲ್ಲಾ ವೈಜ್ಞಾನಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೆ ತಂದರು ಎಂದು ಸ್ಮರಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










