ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ಭಗತ್ ಸಿಂಗ್ ದೇಶದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರು ಕೇವಲ ಬ್ರಿಟಿಷರನ್ನು ಭಾರತದಿಂದ ಓಡಿಸಿದರೆ ಸಾಲದು, ಅವರ ಜಾಗದಲ್ಲಿ ನಮ್ಮವರೇ ಕುಳಿತು ರೈತ ಕಾರ್ಮಿಕರ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುವಂತಹ ಸ್ವಾತಂತ್ರ್ಯ ನಮಗೆ ಬೇಕಿಲ್ಲ ಎಂದಿದ್ದರು ಎಂದು ಕಾರ್ಮಿಕ ಮುಖಂಡ ರವಿಕುಮಾರ್ ಹೇಳಿದರು.
ಅವರು ಸೋಮವಾರ ಎಐಡಿವೈಒ, ಎಐಡಿಎಸ್ಒ ಸಂಘಟನೆಗಳ ವತಿಯಿಂದ ಭಗತ್ ಸಿಂಗ್ರ 96ನೇ ಹುತಾತ್ಮ ದಿನವನ್ನು ನಗರದ ಭಗತ್ ಸಿಂಗ್ ಉದ್ಯಾನವನ ಮತ್ತು ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಬೆಳಗ್ಗೆ 7ಕ್ಕೆ ಭಗತ್ ಸಿಂಗ್ ಉದ್ಯಾನವನದ ಬಳಿ ಧೀರ ಹುತಾತ್ಮ ಭಗತ್ ಸಿಂಗ್ ಭಾವಚಿತ್ರಕ್ಕೆ ಮಾಲಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 6.30ಕ್ಕೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಸ್ಮರಣಸಭೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಮಾನವನಿಂದ ಮಾನವನ ಶೋಷಣೆಗೆ ಅವಕಾಶವೇ ಇಲ್ಲದಂತಹ ಸಮಾಜವಾದಿ ಸಮಾಜ ನಮ್ಮದಾಗಬೇಕು ಎಂದು ಬಯಸಿದ್ದರು. ಅದಕ್ಕಾಗಿ ಅವಿರತವಾಗಿ ಹೋರಾಡಿ ಕೇವಲ ತಮ್ಮ 23ನೇ ವಯಸ್ಸಿನಲ್ಲೇ ತನ್ನ ಸಹೋದರಾದ ಸುಖದೇವ್ ಮತ್ತು ರಾಜಗುರು ಅವರೊಂದಿಗೆ ಗಲ್ಗಂಬವನ್ನೇರಿ ಹುತಾತ್ಮರಾದರು. ಅವರು ಅಂದು ನುಡಿದ ಮಾತು ಇಂದಿಗೂ ನಿಜವಾಗಿದೆ. ಇಂದು ನಮ್ಮ ದೇಶದ ಬಂಡವಾಳಿಗರು ದುಡಿಯುವ ಜನರನ್ನು ಶೋಷಿಸುತ್ತಿದ್ದಾರೆ. ಸಮಾನತೆ ಕೇವಲ ಮಾತುಗಳಲ್ಲಿ ಮಾತ್ರ ಉಳಿದಿದೆ. ಆದ್ದರಿಂದ ನಾವು ಭಗತ್ ಸಿಂಗ್ರ ಆದರ್ಶವನ್ನು, ಚಿಂತನೆಗಳನ್ನು ಅರ್ಥೈಸಿಕೊಂಡು ನಮ್ಮ ಸಮಾಜದ ಆಮೂಲಾಗ್ರ ಬದಲಾವಣೆಗಾಗಿ ಹೋರಾಡಬೇಕು ಎಂದರು.
ಬರಹಗಾರ ಎಚ್. ಆನಂದಕುಮಾರ್ ಅವರು ಮಾತನಾಡಿ, ಭಗತ್ ಸಿಂಗ್ ಕೇವಲ ಒಬ್ಬ ಹೋರಾಟಗಾರರಾಗಿರಲಿಲ್ಲ. ಅವರೊಬ್ಬ ಚಿಂತಕರಾಗಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನ ಸಂಪತ್ತನ್ನು ಗಳಿಸಿ ದೇಶದ ಸವಾರ್ಂಗೀಣ ಪ್ರಗತಿಗಾಗಿ ಅಮೂಲ್ಯವಾದ ಸಮಾಜವಾದಿ ಚಿಂತನೆಯನ್ನು ಅವರು ನೀಡಿದ್ದಾರೆ. ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಹೊಣೆ ನಮ್ಮ ಮೇಲಿದೆ ಎಂದರು.
ಈ ಎಐಡಿಎಸ್ಒ ಮುಖಂಡ ಈರಣ್ಣ ಮಾತನಾಡಿ, ಭಗತ್ ಸಿಂಗ್ರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಮಗೆ ಪ್ರೇರಣೆ ನೀಡುತ್ತವೆ. ಇಂದು ಸರ್ಕಾರ ಹಳ್ಳಿಗಳ ಶಾಲೆಗಳಲ್ಲಿ ಕಡಿಮೆ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಸಾವಿರಾರು ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸಣ್ಣ ಸಣ್ಣ ಶಾಲೆಗಳನ್ನು ದೊಡ್ಡ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ. ಬಡವರ ಬದುಕಿನ ಬೆಳಕಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡದೆ, ನಾವು ಹೋರಾಟ ಬೆಳೆಸುತ್ತಿದ್ದೇವೆ. ಇಂತಹ ಹೋರಾಟಕ್ಕೆ ಭಗತ್ ಸಿಂಗ್ ಸ್ಪೂರ್ತಿಯಾಗಿದ್ದಾರೆ. ಎಲ್ಲಾ ಸಾರ್ವಜನಿಕರು ಈ ಹೋರಾಟವನ್ನು ಬೆಂಬಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿದ್ದ ಅನೇಕ ಹಿರಿಯ ನಾಗರಿಕರು, ವಿದ್ಯಾರ್ಥಿ-ಯುವಕರು ಭಾಗವಹಿಸಿದ್ದರು. ಹುತಾತ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.













