ನವದೆಹಲಿ : ತುರ್ತು ಆರ್ಥಿಕ ಅಗತ್ಯಗಳಿಗಾಗಿ ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (PF) ಖಾತೆಯಿಂದ ಹಣವನ್ನು ಹಿಂಪಡೆಯುವುದು ಸಾಮಾನ್ಯ. ವಿವಿಧ ಕಾರಣಗಳನ್ನು ನೀಡಿ ಆನ್‌ಲೈನ್ ಮೂಲಕ ಸುಲಭವಾಗಿ ಪಿಎಫ್ ಹಣ ಪಡೆಯಲು ಇಪಿಎಫ್‌ಒ ಪೋರ್ಟಲ್‌ನಲ್ಲಿ ಕ್ಲೈಮ್ ಸಲ್ಲಿಸಬೇಕಾಗುತ್ತದೆ.
ಅಧಿಕಾರಿಗಳ ಪರಿಶೀಲನೆ ಬಳಿಕ ಅನುಮೋದನೆ ಸಿಕ್ಕರೆ 2-3 ದಿನಗಳಲ್ಲಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಇತ್ತೀಚೆಗೆ ಆಟೋಮ್ಯಾಟಿಕ್ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಹಣ ಮತ್ತಷ್ಟು ವೇಗವಾಗಿ ಜಮೆಯಾಗುತ್ತಿದೆ. ಆದರೆ, ಮಾಡುವ ಸಣ್ಣ ಸಣ್ಣ ತಪ್ಪುಗಳಿಂದ ಪಿಎಫ್ ಕ್ಲೈಮ್ ತಿರಸ್ಕೃತಗೊಳ್ಳುವ (Reject) ಸಾಧ್ಯತೆ ಇರುತ್ತದೆ. ಆ ತಪ್ಪುಗಳು ಯಾವುವು ಎಂಬುದರ ವಿವರ ಇಲ್ಲಿದೆ.
ಕ್ಲೈಮ್ ತಿರಸ್ಕೃತಗೊಳ್ಳಲು ಪ್ರಮುಖ ಕಾರಣಗಳು
UAN ಮತ್ತು ಆಧಾರ್ ವಿವರಗಳಲ್ಲಿ ವ್ಯತ್ಯಾಸ: ಪಿಎಫ್ ಖಾತೆಯಲ್ಲಿರುವ ಮಾಹಿತಿ ಮತ್ತು ಆಧಾರ್ ಕಾರ್ಡ್‌ನಲ್ಲಿರುವ ವಿವರಗಳು ನಿಖರವಾಗಿ ಹೊಂದಾಣಿಕೆಯಾಗಬೇಕು. ಹೆಸರು, ಹುಟ್ಟಿದ ದಿನಾಂಕದ ಸ್ಪೆಲ್ಲಿಂಗ್‌ನಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಕ್ಲೈಮ್ ತಿರಸ್ಕೃತಗೊಳ್ಳುತ್ತದೆ.
ಬ್ಯಾಂಕ್ ಖಾತೆಯ ವಿವರಗಳು: ಪಿಎಫ್ ಪೋರ್ಟಲ್‌ನಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ (IFSC) ಕೋಡ್ ಹಾಗೂ ಖಾತೆದಾರರ ಹೆಸರು ಸರಿಯಾಗಿರಬೇಕು.
ನಿಷ್ಕ್ರಿಯ ಬ್ಯಾಂಕ್ ಖಾತೆ: ಪಿಎಫ್‌ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು. ಖಾತೆ ಕ್ಲೋಸ್ ಆಗಿದ್ದರೆ ಅಥವಾ ನಿಷ್ಕ್ರಿಯವಾಗಿದ್ದರೆ ಹಣ ವರ್ಗಾವಣೆಯಾಗುವುದಿಲ್ಲ.
ಕೆವೈಸಿ (KYC) ವಿವರಗಳನ್ನು ಪರಿಶೀಲಿಸಿಕೊಳ್ಳಿ:
ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಆಧಾರ್, ಬ್ಯಾಂಕ್ ಖಾತೆ ಮತ್ತು ಪ್ಯಾನ್ (PAN) ವಿವರಗಳ ಕೆವೈಸಿ ಪರಿಶೀಲನೆ (Verification) ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇವುಗಳಲ್ಲಿ ಯಾವುದೇ ದಾಖಲೆ ಅಪೂರ್ಣವಾಗಿದ್ದರೂ ಪ್ರಕ್ರಿಯೆ ವಿಳಂಬವಾಗುತ್ತದೆ.
ಜೊತೆಗೆ, ಕಂಪನಿಗೆ ಸೇರಿದ ದಿನಾಂಕ (Date of Joining) ಹಾಗೂ ಕೆಲಸ ಬಿಟ್ಟ ದಿನಾಂಕ (Date of Exit) ತಪ್ಪಾಗಿ ನಮೂದಾಗಿದ್ದರೂ ಕ್ಲೈಮ್ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ಉದ್ಯೋಗದಾತರನ್ನು (Employer) ಸಂಪರ್ಕಿಸಿ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು.

ಅರ್ಜಿ ಸಲ್ಲಿಸುವ ಮುನ್ನ ಈ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಂಡರೆ ಯಾವುದೇ ಅಡೆತಡೆ ಇಲ್ಲದೆ ಪಿಎಫ್ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.











