Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾವೇರಿ ನಿವಾಸದಲ್ಲಿ ಭಾವುಕ ಕ್ಷಣ: ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆಶಿ, ಆಲಿಂಗನದ ಫೋಟೋ ವೈರಲ್!

---Advertisement---

ಸುದ್ದಿಒನ್, ಬೆಂಗಳೂರು, ಮೇ. 28 : ಕರ್ನಾಟಕ ರಾಜಕೀಯದಲ್ಲಿ ಇಂದು ಅಪರೂಪದ ಹಾಗೂ ಭಾವುಕ ಕ್ಷಣವೊಂದು ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಚರ್ಚೆಗಳ ನಡುವೆಯೇ, ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಉಪಹಾರ ಕೂಟ ರಾಜಕೀಯ ವಲಯದ ಗಮನ ಸೆಳೆಯಿತು. ಸಭೆಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ‌ಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಕಾವೇರಿ ನಿವಾಸಕ್ಕೆ ಬಂದ ಡಿಕೆ ಶಿವಕುಮಾರ್ ನೇರವಾಗಿ ಸಿದ್ದರಾಮಯ್ಯ ಅವರ ಬಳಿ ತೆರಳಿ ಗೌರವ ಸೂಚಕವಾಗಿ ಕಾಲಿಗೆ ನಮಸ್ಕರಿಸಿದರು. ಈ ವೇಳೆ ಸಿದ್ದರಾಮಯ್ಯ ಅವರು ಡಿಕೆಶಿಯನ್ನು ಕೈಹಿಡಿದು ಎಬ್ಬಿಸಿ ಆತ್ಮೀಯವಾಗಿ ಆಲಿಂಗಿಸಿಕೊಂಡರು. ಇಬ್ಬರು ನಾಯಕರ ನಡುವಿನ ಈ ಭಾವುಕ ಕ್ಷಣದ ಫೋಟೋಗಳು ಹಾಗೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಒಳರಾಜಕೀಯದಲ್ಲಿ ನಾಯಕತ್ವ ಪೈಪೋಟಿ ಮತ್ತು ಶೀತಲ ಸಮರದ ಮಾತುಗಳು ಕೇಳಿಬರುತ್ತಿದ್ದ ಹಿನ್ನೆಲೆ, ಇಂದು ಕಂಡುಬಂದ ಈ ಸೌಹಾರ್ದತೆಯ ದೃಶ್ಯಕ್ಕೆ ವಿಶೇಷ ರಾಜಕೀಯ ಅರ್ಥ ಕಲ್ಪಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ‘ಅವಧಿ ಹಂಚಿಕೆ’ ಸೂತ್ರ ರೂಪುಗೊಂಡಿತ್ತು ಎನ್ನಲಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿಕೆ ಶಿವಕುಮಾರ್ ನಡೆಸಿದ ಸುದೀರ್ಘ ರಾಜಕೀಯ ಹೋರಾಟಕ್ಕೆ ಇದೀಗ ಫಲ ಸಿಕ್ಕಂತಾಗಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲು ಒಲವು ತೋರಿದೆ ಎನ್ನಲಾಗುತ್ತಿರುವ ಹಿನ್ನೆಲೆ, ಇಂದಿನ ಉಪಹಾರ ಸಭೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಯಾವುದೇ ಗೊಂದಲ ಅಥವಾ ರಾಜಕೀಯ ಹೈಡ್ರಾಮಾಗಳಿಲ್ಲದೆ ಸುಗಮವಾಗಿ ಅಧಿಕಾರ ಹಸ್ತಾಂತರವಾಗಬೇಕು ಎಂಬ ಉದ್ದೇಶದಿಂದಲೇ ಈ ಸಭೆ ಆಯೋಜಿಸಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಈ ಭಾವುಕ ಕ್ಷಣವನ್ನು ಕಾಂಗ್ರೆಸ್ ನಾಯಕರು “ರಾಜಕೀಯ ಪ್ರೌಢಿಮೆಯ ಸಂಕೇತ” ಎಂದು ಬಣ್ಣಿಸುತ್ತಿದ್ದಾರೆ. “ಇದು ಕೇವಲ ಅಧಿಕಾರ ಬದಲಾವಣೆ ಅಲ್ಲ, ಇಬ್ಬರು ಪ್ರಭಾವಿ ನಾಯಕರ ನಡುವಿನ ಪರಸ್ಪರ ಗೌರವದ ಪ್ರತೀಕ” ಎಂದು ಕೈ ಪಾಳಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now