ಬೆಂಗಳೂರು.ಸೆಪ್ಟೆಂಬರ್.07 : ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ರಜತ ಮಹೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣಾ ರಾಜಕೀಯದಿಂದ ಮಾತ್ರ ನಾನು ಹಿಂದೆ ಸರಿದಿದ್ದೇನೆ. ಯಾಕೆಂದರೆ ನಮ್ಮ ಚುನಾವಣಾ ವ್ಯವಸ್ಥೆಯು ಬಹಳ ದುಬಾರಿಯಾಗಿದೆ. ಚುನಾವಣಾ ವ್ಯವಸ್ಥೆ ಸುಧಾರಣೆಯಾಗಬೇಕು. ನನಗೆ ವಯಸ್ಸಾಗಿದೆ, ಆ ಕಾರಣದಿಂದ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಜೊತೆಗೆ ಚುನಾವಣಾ ವ್ಯವಸ್ಥೆ ಬಹಳ ಹದಗೆಟ್ಟಿದೆ. ಚುನಾವಣೆಯಲ್ಲಿ ಹಣ ಹಾಕಿ ಗೆಲ್ಲಬೇಕಾದರೆ ಅದಕ್ಕಾಗಿ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆ ಕಾರಣದಿಂದ ಹೊರತು ಬೇರೆ ಯಾವುದೇ ಕಾರಣದಿಂದ ನಾನು ಹಿಂದೆ ಸರಿದಿರುವುದಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಜೊತೆಗೆ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನನಗೆ ಆಹ್ವಾನವನ್ನು ನೀಡಿದ್ದರು. ನಾನು ಪ್ರೀತಿಯಿಂದ ಒಪ್ಪಿಕೊಂಡೆ. ಆದರೆ ನನಗೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಕೂಡ ಇಟ್ಟುಕೊಂಡಿದ್ದಾರೆ ಎಂದು ಆಹ್ವಾನ ಪತ್ರಿಕೆಯನ್ನು ನೋಡಿದ ಮೇಲೆ ತಿಳಿಯಿತು. ಇದರ ಅವಶ್ಯಕತೆ ಇರಲಿಲ್ಲ ಎಂಬುದು ನನ್ನ ಭಾವನೆ ಎಂದರು.

ನೀವೆಲ್ಲರೂ ಕೂಡ ಕಳೆದ 4 -5 ದಶಕಗಳಿಂದ ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ. ಆಶೀರ್ವಾದ ಮಾಡುತ್ತಾ ಬಂದಿದ್ದೀರಿ. ಅದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದು ನನ್ನ ಮನದಾಳದ ಇಚ್ಛೆ. ನೀವು ಅಭಿನಂದನೆಗೆ ಅರ್ಹರು, ನಾನಲ್ಲ. ನಾನು ನಿಮ್ಮವನೇ, ನಿಮ್ಮಲ್ಲೇ ಒಬ್ಬನಾಗಿ ಈ ಹೋರಾಟವನ್ನು ಈಗಲೂ, ಮುಂದೆಯೂ ಮಾಡುವಂತಹ ಕೆಲಸವನ್ನು ನಾನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ನಾನು ಹಿಂದುಳಿದ ಜಾತಿಗೆ ಸೇರಿದವನು ಎಂದು ಹೇಳಲು ಯಾವುದೇ ಮುಜುಗರವಿಲ್ಲ. ಯಾಕೆಂದರೆ ಈ ದೇಶದಲ್ಲಿ ಬಹಳ ವರ್ಷಗಳ ಕಾಲ ಜಾತಿ ವ್ಯವಸ್ಥೆಯಿತ್ತು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವರ್ಣ ವ್ಯವಸ್ಥೆಯಿತ್ತು. ನಾನು ಶೂದ್ರಕ್ಕೆ ಸೇರಿದವನು. ಲಿಂಗಾಯತ, ಒಕ್ಕಲಿಗ ಆದಿಯಾಗಿ ನಾವೆಲ್ಲರೂ ಕೂಡ ಶೂದ್ರರೆ. ವರ್ಣ ವ್ಯವಸ್ಥೆಯಲ್ಲಿ ಮೇಲಿನ ಮೂರು ಜಾತಿಗಳಿಗೆ ಅವಕಾಶಗಳಿದ್ದವು. ಆದರೆ ಶೂದ್ರರಿಗೆ ಅವಕಾಶಗಳು ಸಿಗಲಿಲ್ಲ. ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರೆ ಈ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಗಲು ಸಾಧ್ಯವಾಗುತ್ತಿರಲಿಲ್ಲ. ಶೂದ್ರ ವರ್ಗದ ಜನರು ಅಕ್ಷರ ಸಂಸ್ಕೃತಿಯಿಂದ, ಅವಕಾಶಗಳಿಂದ ವಂಚಿತರಾಗುತ್ತಿರಲಿಲ್ಲ.
ನಾನು ವಿದ್ಯಾರ್ಥಿ ದೆಸೆಯಿಂದಲೂ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ ಬಂದಿದ್ದೇನೆ. ನಾನು ಬಹಳ ಕಷ್ಟಪಟ್ಟು ಓದಿ, ಕಾನೂನು ಪದವಿಯನ್ನು ಪಡೆದುಕೊಂಡು, ನಂತರ ರಾಜಕಾರಣಿಯಾಗಿ ಹಿಂದುಳಿದ ಜಾತಿಗಳು, ಶೋಷಿತ ವರ್ಗಗಳು ಹೀಗೆ ಯಾರ್ಯಾರು ಅವಕಾಶಗಳಿಂದ ವಂಚಿತರಾಗಿದ್ದಾರೆ ಅವರೆಲ್ಲರ ಪರವಾಗಿ ಹೋರಾಟ ನಡೆಸಿದೆ. ಸಾಮಾಜಿಕ ನ್ಯಾಯ ಸಿಗಬೇಕು, ಯಾರೊಬ್ಬರೂ ದೌರ್ಜನ್ಯಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ಅಸಮಾನತೆಯ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಈಗಲೂ, ಮುಂದೆಯೂ ಕೂಡ ಧ್ವನಿ ಎತ್ತುತ್ತೇನೆ ಎಂದು ಹೇಳಿದ್ದಾರೆ.
ನಿಮಗೆ ನ್ಯಾಯ ಸಿಗುವವರೆಗೆ, ಸಮಾನ ಅವಕಾಶ ಸಿಗುವವರೆಗೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೆ ನಿಮ್ಮೊಂದಿಗೆ ಇದ್ದು, ಹೋರಾಟ ಮಾಡುತ್ತೇನೆ. ಹೀಗಾಗಿ ನೀವ್ಯಾರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದರು.
ಇದು ಒಕ್ಕೂಟದ ರಜತ ಮಹೋತ್ಸವ. 2001ರಲ್ಲಿ ಶ್ರೀನಿವಾಸ್ ಎಂಬ ಬೆಸ್ತ ಸಮುದಾಯಕ್ಕೆ ಸೇರಿದ ವ್ಯಕ್ತಿ ಇದರ ಸಂಸ್ಥಾಪಕರಾಗಿದ್ದರು. ಈಗ ರಾಮಚಂದ್ರಪ್ಪನವರು ಅಧ್ಯಕ್ಷರಾಗಿದ್ದಾರೆ. ಸ್ವಾತಂತ್ರ್ಯ ಬಂದು 79 ವರ್ಷಗಳಾಯಿತು. ಸಂವಿಧಾನ ಬಂದು 76 ವರ್ಷಗಳಾಯಿತು. ಆದರೆ ಇನ್ನೂ ಎಲ್ಲರಿಗೂ ಸಮಾನ ಅವಕಾಶ ದೊರಕಿಲ್ಲ, ಜೊತೆಗೆ ಸಮ ಸಮಾಜ ನಿರ್ಮಾಣ ಆಗಿಲ್ಲ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ನಿಮ್ಮ ಹೋರಾಟ ಇರಲೇಬೇಕು ಎಂದಿದ್ದಾರೆ.
ಸಾವಿರಾರು ವರ್ಷಗಳಿಂದ ಮನುಸ್ಮೃತಿ ಜಾರಿಯಲ್ಲಿತ್ತು. ಅದು ಅಲಿಖಿತ ಸಂವಿಧಾನ. ಅದರ ಪ್ರಕಾರವೇ ಜಾತಿಗಳನ್ನು ಒಡೆದು, ಶ್ರೇಣೀಕೃತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಪಟ್ಟಭದ್ರರು ತಮ್ಮ ಬೆಳೆಕಾಳು ಬೇಯಿಸುವ ಕೆಲಸ ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿ ಇಂದು ಅಸಮಾನತೆ ನಿರ್ಮಾಣವಾಗಿದೆ. ಇಷ್ಟು ವರ್ಷಗಳಾಗಿದ್ದರೂ ಇನ್ನೂ ಕೂಡ ಅಸಮಾನತೆ ಹೋಗಿಲ್ಲ. ಈ ದೇಶದಲ್ಲಿ ಒಂದು ದಿನ ಸಮ ಸಮಾಜ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಇಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವನ್ನು ಆಚರಣೆ ಮಾಡುತ್ತಿದ್ದೇವೆ. ಜೊತೆಗೆ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನನಗೆ ಆಹ್ವಾನವನ್ನು ನೀಡಿದ್ದರು. ನಾನು ಪ್ರೀತಿಯಿಂದ ಒಪ್ಪಿಕೊಂಡೆ. ಆದರೆ ನನಗೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಅಭಿನಂದನೆ… pic.twitter.com/TMPPAFn7wy
— Siddaramaiah (@siddaramaiah) September 6, 2026












