ಬೆಂಗಳೂರು: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸುತ್ತಿರುವ ಮಾರಕ ‘ಎಬೋಲಾ’ ವೈರಸ್ ಹರಡುವಿಕೆಯನ್ನು ತಡೆಯಲು ಕರ್ನಾಟಕ ಸರ್ಕಾರ ಈಗಿನಿಂದಲೇ ಫೀಲ್ಡಿಗಿಳಿದಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತುರ್ತು ಸುತ್ತೋಲೆಯನ್ನು ಹೊರಡಿಸುವ ಮೂಲಕ ಕಟ್ಟೆಚ್ಚರ ವಹಿಸಿದೆ.
ರಾಜ್ಯದಲ್ಲಿ ಎಲ್ಲಾದರೂ ಎಬೋಲಾ ಸೋಂಕಿನ ಲಕ್ಷಣಗಳುಳ್ಳ ಶಂಕಿತ ಅಥವಾ ದೃಢಪಟ್ಟ ಪ್ರಕರಣಗಳು ಪತ್ತೆಯಾದರೆ, ಕಣ್ಣು ಮುಚ್ಚಿ ಕೂರುವಂತಿಲ್ಲ! ಯಾವುದೇ ತಡ ಮಾಡದೆ ತಕ್ಷಣವೇ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ರೋಗಿಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಅವರ ಸಂಪೂರ್ಣ ಮಾಹಿತಿಯನ್ನು ದಾಖಲಿಸಿ, ಹಿರಿಯ ಅಧಿಕಾರಿಗಳಿಗೆ ರವಾನಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಎಬೋಲಾ ಪ್ರಕರಣಗಳ ಮೇಲೆ ನಿಗಾವಹಿಸಲು ಮತ್ತು ವೇಗವಾಗಿ ಮಾಹಿತಿ ಹಂಚಿಕೊಳ್ಳಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ‘ಸಮಗ್ರ ಆರೋಗ್ಯ ಮಾಹಿತಿ ವೇದಿಕೆ’ (IHIP) ಪೋರ್ಟಲ್ ಸಜ್ಜಾಗಿದ್ದು, ಆಸ್ಪತ್ರೆಗಳು ಯಾವುದೇ ಶಂಕಿತ ಪ್ರಕರಣಗಳಿದ್ದರೂ ತಕ್ಷಣವೇ ಈ ಆನ್‌ಲೈನ್ ವೇದಿಕೆಯ ಮೂಲಕ ವರದಿ ಸಲ್ಲಿಸಬೇಕೆಂದು ಇಲಾಖೆ ಸೂಚಿಸಿದೆ.

ಸರ್ಕಾರದ ಈ ನಿಯಮಗಳು ಕೇವಲ ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಲ್ಲಾ ಖಾಸಗಿ ಮೆಡಿಕಲ್ ಇನ್ಸ್ಟಿಟ್ಯೂಟ್‌ಗಳು, ಪ್ರೈವೇಟ್ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸಹ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೇವಲ ಆನ್‌ಲೈನ್ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಿದರೆ ಸಾಲದು; ಸ್ಥಳೀಯವಾಗಿ ವೈರಸ್ ಹರಡುವುದನ್ನು ತಡೆಯಲು ಆಯಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ತಕ್ಷಣವೇ ನೇರ ಮಾಹಿತಿ ನೀಡಬೇಕು. ಇದು ಸ್ಥಳೀಯ ಮಟ್ಟದಲ್ಲೇ ಕ್ವಾರಂಟೈನ್ (ಸೋಂಕು ನಿಯಂತ್ರಣ ವಲಯ) ಮತ್ತು ಸೂಕ್ತ ಚಿಕಿತ್ಸಾ ವ್ಯವಸ್ಥೆಗಳನ್ನು ತಕ್ಷಣವೇ ಜಾರಿಗೆ ತರಲು ನೆರವಾಗಲಿದೆ.








