ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ. 13 : ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯೆಂದು ಬಿಜೆಪಿ ಪಕ್ಷದ ಕೆ.ಎಂ.ಸುರೇಶ ರವರು ಜೆಡಿಎಸ್ ಪಕ್ಷದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಪದವೀಧರರನ್ನು ಭೇಟಿ ಮಾಡಿ ದಾರಿ ತಪ್ಪಿಸುತ್ತಿರುವುದನ್ನು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ ಖಂಡಿಸಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾದ ಚೌಡರೆಡ್ಡಿ ತೂಪಲ್ಲಿರವರು ಪಕ್ಷಕ್ಕಾಗಿ ದುಡಿದು 2012, 2014, 2020ರಲ್ಲಿ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿ ಅದರಲ್ಲಿ ಒಂದು ಬಾರಿ ಪದವೀಧರ ಕ್ಷೇತ್ರದಿಂದ ಗೆದ್ದು ಪದವೀಧರ ಮತ್ತು ಶಿಕ್ಷಕರಿಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದು ಮತ್ತು ನಿರಂತರವಾಗಿ ಪಕ್ಷದ ಕಾರ್ಯಕರ್ತರು ಮತ್ತು ಪದವೀಧರರನ್ನು ಶಿಕ್ಷಕರನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯೆಂದು ಕರಪತ್ರದಲ್ಲಿ ಪಕ್ಷದ ಮುಖಂಡರುಗಳನ್ನಾಗಲಿ ಪ್ರಸ್ತುತ ಪಕ್ಷದ ಆಗ್ನೇಯ ಪದವೀಧರ ಕ್ಷೇತ್ರದ ಆಕಾಂಕ್ಷಿಗಳನ್ನಾಗಲೀ ಕೇಳದೆ ಪೋಟೋಗಳನ್ನು ಬಳಸಿರುವುದು ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರವರು ಮತ್ತು ಹೆಚ್.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ಮುಖಂಡರಿಂದಾಗಲೀ ನಮಗೆ ಯಾವುದೇ ರೀತಿಯಾದ ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಎಂದು ಸಂದೇಶ ನೀಡಿರುವುದಿಲ್ಲ. ನಾನು ಯುವ ಘಟಕದ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡಿದ್ದು, ಈ ಹಿಂದೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿ, ತನ್ನದೇ ಆದಂತಹ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಸ್ಪಂಧಿಸಿದ್ದೇನೆ ಎಂದು ಪ್ರತಾಪ್ ಜೋಗಿ ತಿಳಿಸಿದ್ದಾರೆ.
ಸದರಿ ವಿಚಾರವಾಗಿ ಮಾಜಿ ವಿಧಾನಪರಿಷತ್ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ ರವರ ಗಮನಕ್ಕೆ ತಂದಾಗ ನಾನು ಸಹ ಜೆಡಿಎಸ್ ಅಥವಾ ಎನ್.ಡಿ.ಎನಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ, ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿರವರ ಗಮನಕ್ಕೆ ಮಾಹಿತಿ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರಾದ ಅಮಿತ್‍ಶಾ ರವರನ್ನು ಭೇಟಿ ಮಾಡಿ ಪಕ್ಷದಿಂದ ನನಗೆ ಎನ್.ಡಿ.ಎ ಪಕ್ಷದಿಂದ ಅಭ್ಯರ್ಥಿಯಾಗಲು ಅವಕಾಶ ಸಿಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಸಮನ್ವಯ ಸಮಿತಿಯಿಂದ ಯಾವುದೇ ರೀತಿಯಾದ ಸೂಚನೆ ಬಂದಿಲ್ಲ ಮತ್ತು ಎನ್.ಡಿ.ಎ ಅಭ್ಯರ್ಥಿ ಕೆ.ಎಂ.ಸುರೇಶ್ ಎಂದು ಜೆಡಿಎಸ್ ಪಕ್ಷಕ್ಕಾಗಲೀ ಆದೇಶ ಬಂದಿರುವುದಿಲ್ಲ. ಆದ್ದರಿಂದ ಎನ್.ಡಿ.ಎ ಅಭ್ಯರ್ಥಿ ಎಂದು ಗೊಂದಲ ಮೂಡಿಸಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಅನೇಕ ಪದವೀಧರರು, ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಜೆಡಿಎಸ್ ಪಕ್ಷದ ಅಧ್ಯಕ್ಷರುಗಳು ಮುಖಂಡರುಗಳು ಮತ್ತು ಪದವೀಧರರು, ಶಿಕ್ಷಕರು ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದ ವರಿಷ್ಟರಿಂದ ಆದೇಶ ಮತ್ತು ಸೂಚನೆ ಬಂದಾಗ ನಾವು ಎನ್.ಡಿ.ಎ ಅಭ್ಯರ್ಥಿಯೆಂದು ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡೋಣ. ಬಿಜೆಪಿ ಪಕ್ಷದ ಅಭ್ಯರ್ಥಿ ಯಾವುದೇ ರೀತಿಯಾದಂತಹ ಗೊಂದಲಗಳನ್ನು ಮಾಡಬಾರದು ನಮ್ಮ ಪಕ್ಷದ ಮುಖಂಡರುಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಏಕೆಂದರೆ ಕಳೆದ ಬಾರಿ ಅಲ್ಪಮತಗಳಿಂದ ಜೆಡಿಎಸ್ ಅಭ್ಯರ್ಥಿಯಾದ ಚೌಡರೆಡ್ಡಿ ತೂಪಲ್ಲಿ ಪರಾಭವಗೊಂಡಿದ್ದರಿಂದ ಈ ಬಾರಿ ಎನ್.ಡಿ.ಎ ಅಭ್ಯರ್ಥಿಯೆಂದು ಚೌಡರೆಡ್ಡಿ ತೂಪಲ್ಲಿರವರನ್ನು ಘೋಷಿಸಿದರೆ ಅತಿಹೆಚ್ಚು ಮತಗಳಿಂದ ಗೆದ್ದು ಎನ್.ಡಿ.ಎ ಪಕ್ಷಕ್ಕೆ ಒಂದು ಶಕ್ತಿಯಾಗುತ್ತದೆ. ಇಲ್ಲವಾದರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷವು ಸಮನ್ವಯ ಸಮಿತಿ ರಚಿಸಿ ಕುಮಾರಸ್ವಾಮಿರವರು ಆದೇಶಿಸಿದರೆ ಎನ್.ಡಿ.ಎ ಅಭ್ಯರ್ಥಿಯೆಂದು ಸೂಚಿಸಿದ ಅಭ್ಯರ್ಥಿಗೆ ಜೆಡಿಎಸ್ ಪಕ್ಷವು ಬೆಂಬಲಿಸುತ್ತದೆ ಎಂದು ಪ್ರತಾಪ್ ಜೋಗಿ ತಿಳಿಸಿದ್ದಾರೆ.










